ಬೆಂಗಳೂರು : ದೇಶದಲ್ಲಿಯೇ ಮೊದಲ ಬಾರಿಗೆ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ಪದ್ಧತಿ ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸಜ್ಜಾಗಿದೆ. ಸಂಪನ್ಮೂಲ ಕ್ರೋಡೀಕರಣ ಸಮಿತಿ ನೀಡಿರುವ ವರದಿ ಆಧರಿಸಿ ಸರ್ಕಾರ ಪ್ರಕಟಿಸಿರುವ ಅಬಕಾರಿ ಸುಧಾರಣೆ-2026ರ ಕರಡು ವರದಿಯಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ.
ಈ ಬೆನ್ನಲ್ಲೇ ಸರ್ಕಾರದ ಈ ‘ಆನ್‌ಲೈನ್ ಮದ್ಯ ಮಾರಾಟ’ದ ಪ್ರಸ್ತಾವನೆಗೆ KRS ಪಕ್ಷ ತೀವ್ರ ವಿರೋಧ ವ್ಯಕಪಡಿಸಿದ್ದು, ರಾಜ್ಯಾದ್ಯಂತ ಅಬಕಾರಿ ಅಧಿಕಾರಿಗಳ ಸಹಭಾಗಿತ್ವದಲ್ಲಿಯೇ ಅಕ್ರಮ ಮದ್ಯ ತಡೆಗೆ ‘ಜನಾಂದೋಲನ’ ನಡೆಸಲು ಸಜ್ಜಾಗಿದೆ. ರಾಜ್ಯ ಸರ್ಕಾರವು ಅಬಕಾರಿ ಸುಧಾರಣಾ ವರದಿಯ ನೆಪದಲ್ಲಿ ‘ಆನ್‌ಲೈನ್ ಮೂಲಕ ಮದ್ಯ ಮಾರಾಟ’ ಮಾಡಲು ಮುಂದಾಗಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ. ಈ ಜನವಿರೋಧಿ ನೀತಿಯನ್ನು ಕೈಬಿಡಲು ಆಗ್ರಹಿಸಿ ಹಾಗೂ ರಾಜ್ಯದ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯದ ದಂಧೆಯನ್ನು ನಿರ್ಮೂಲನೆ ಮಾಡಲು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ರಾಜ್ಯಾದ್ಯಂತ ಬೃಹತ್ ಹೋರಾಟ ಮತ್ತು ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದೆ.
KRS ಪಕ್ಷವು ಈಗಾಗಲೇ ರಾಜ್ಯದ ಹಲವಾರು ಗ್ರಾಮಗಳಲ್ಲಿ ಕೇವಲ ಪ್ರತಿಭಟನೆಗೆ ಸೀಮಿತವಾಗದೆ, ಅಧಿಕಾರಿಗಳನ್ನು ಜನರ ಬಳಿಗೆ ತರುವ ಕೆಲಸ ಮಾಡುತ್ತಿದೆ. ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ, ರಾಜ್ಯದ ಅನೇಕ ಹಳ್ಳಿಗಳಲ್ಲಿ ಅಬಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲೇ ಗ್ರಾಮದ ಮಹಿಳೆಯರನ್ನು ಸೇರಿಸಿ ಸಭೆಗಳನ್ನು ನಡೆಸುತ್ತಿದೆ.
ಅಕ್ರಮ ಮದ್ಯ ಮಾರಾಟವಾಗುವ ಸ್ಥಳಗಳ ಬಗ್ಗೆ ಅಧಿಕಾರಿಗಳಿಗೆ ಸ್ಥಳದಲ್ಲೇ ಮಾಹಿತಿ ನೀಡಿ, ಅವರ ಸಹಭಾಗಿತ್ವದೊಂದಿಗೆ ಅಂತಹ ಅಡ್ಡೆಗಳನ್ನು ಬಂದ್ ಮಾಡಿಸುವ ಮೂಲಕ ಕಾನೂನು ಪಾಲನೆಗೆ ಒತ್ತು ನೀಡಲಾಗುತ್ತಿದೆ. ಮದ್ಯಪಾನದ ದುಷ್ಪರಿಣಾಮ ಎದುರಿಸುತ್ತಿರುವ ಗ್ರಾಮೀಣ ಮಹಿಳೆಯರಿಗೆ ಧ್ವನಿ ನೀಡಿ, ಅಧಿಕಾರಿಗಳ ಸಮ್ಮುಖದಲ್ಲೇ ತಮ್ಮ ಅಳಲನ್ನು ತೋಡಿಕೊಳ್ಳಲು ವೇದಿಕೆ ಕಲ್ಪಿಸಲಾಗುತ್ತಿದೆ.
“ಸರ್ಕಾರವು ಜನರಿಗೆ ಕುಡಿಯುವ ನೀರು ಮತ್ತು ಆರೋಗ್ಯ ನೀಡುವ ಬದಲು ಆನ್‌ಲೈನ್ ಮೂಲಕ ಮದ್ಯ ನೀಡಲು ಹೊರಟಿರುವುದು ಖಂಡನೀಯ. ಈಗಾಗಲೇ ಗ್ರಾಮದ ತಾಯಂದಿರು ಅಬಕಾರಿ ಅಧಿಕಾರಿಗಳೊಂದಿಗೆ ಸೇರಿ ಅಕ್ರಮ ಮದ್ಯ ತಡೆಗೆ ಹೋರಾಟ ಆರಂಭಿಸಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕುವ ಅಥವಾ ಮದ್ಯವನ್ನು ಸುಲಭವಾಗಿ ಲಭ್ಯವಾಗಿಸುವ ಯಾವುದೇ ನೀತಿಯನ್ನು ನಾವು ಸಹಿಸುವುದಿಲ್ಲ,” ಎಂದು KRS ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಎಚ್ಚರಿಸಿದ್ದಾರೆ.
ಮನೆ ಬಾಗಿಲಿಗೆ ಮದ್ಯ ತಲುಪಿಸುವ ಪ್ರಸ್ತಾವನೆಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು. ಗ್ರಾಮ ಮಟ್ಟದಲ್ಲಿ ಕಿರಣಿ ಅಂಗಡಿ ಹಾಗೂ ಇತರೆಡೆ ನಡೆಯುವ ಅಕ್ರಮ ಮಾರಾಟವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ತಡೆಯಬೇಕು. ಮುಂದಿನ ದಿನಗಳಲ್ಲಿ ಪಕ್ಷವು ರಾಜ್ಯದ ಪ್ರತಿಯೊಂದು ತಾಲ್ಲೂಕಿನಲ್ಲಿ ಮಹಿಳೆಯರು ಮತ್ತು ಅಬಕಾರಿ ಅಧಿಕಾರಿಗಳ ಸಹಭಾಗಿತ್ವದೊಂದಿಗೆ ಅಕ್ರಮ ಮದ್ಯದ ವಿರುದ್ಧ ಬೃಹತ್ ಸಭೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ KRS ಪಕ್ಷ ತಿಳಿಸಿದೆ.
ಇದನ್ನೂ ಓದಿ : ಗ್ಯಾರಂಟಿ ಸರ್ಕಾರಕ್ಕೆ ‘ಜಿಬಿಎ’ ಚುನಾವಣೆ ನಡೆಸಲು ಹಣದ ಕೊರತೆ – ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ!



















