ಬೆಂಗಳೂರು : ಜಾಗತಿಕ ಭೌಗೋಳಿಕ ರಾಜಕೀಯ ಸಂಘರ್ಷಗಳು ಜಾಸ್ತಿಯಾಗುತ್ತಿರುವ, ಷೇರು ಮಾರುಕಟ್ಟೆ ಕುಸಿಯುತ್ತಿರುವ ಹೊತ್ತಿನಲ್ಲಿ ಜನ ಸುರಕ್ಷಿತ ಹೂಡಿಕೆ ಯೋಜನೆಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಸುರಕ್ಷಿತ ಯೋಜನೆಗಳಲ್ಲಿ ಪೋಸ್ಟ್ ಆಫೀಸಿನ ಕಿಸಾನ್ ವಿಕಾಸ್ ಪತ್ರವು (Kisan Vikas Patra) ಪ್ರಮುಖ ಯೋಜನೆಯಾಗಿದೆ. ಇಲ್ಲಿ ಹೂಡಿಕೆ ಮಾಡುವ ಹಣವು ಕೇಂದ್ರ ಸರ್ಕಾರದ ಸುರಕ್ಷತೆ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ನಿಗದಿತ ಅವಧಿಯಲ್ಲಿ ಹೂಡಿಕೆ ಮಾಡಿದ ಹಣವು ದ್ವಿಗುಣವಾಗುತ್ತದೆ ಎಂಬುದು ಗಮನಾರ್ಹ.
ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವುದರ ಅತಿದೊಡ್ಡ ಆಕರ್ಷಣೆಯೆಂದರೆ ಅದರ ಸ್ಪಷ್ಟತೆ. ಪ್ರಸ್ತುತ ಬಡ್ಡಿದರಗಳ ಪ್ರಕಾರ (ಸರ್ಕಾರವು ಕಾಲಕಾಲಕ್ಕೆ ಪರಿಷ್ಕರಿಸುವಂತೆ), ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವು ಸುಮಾರು 115 ತಿಂಗಳುಗಳಲ್ಲಿ (ಅಂದರೆ 9 ವರ್ಷ ಮತ್ತು 7 ತಿಂಗಳು) ದ್ವಿಗುಣಗೊಳ್ಳುತ್ತದೆ.
ಉದಾಹರಣೆಗೆ, ನೀವು ಇಂದು ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿ ಜಮಾ ಮಾಡಿದರೆ, ಮೆಚ್ಯೂರಿಟಿ ಅವಧಿ ಮುಗಿದ ನಂತರ ಯಾವುದೇ ರಿಸ್ಕ್ ಇಲ್ಲದೆ ನಿಮಗೆ 10 ಲಕ್ಷ ರೂ. ಲಭಿಸುತ್ತದೆ. ದೀರ್ಘಾವಧಿಗೆ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ, ಅದನ್ನು ಬೆಳೆಸಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಯೋಜನೆ ಎನಿಸಿದೆ.
ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಬಡ್ಡಿಯನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಪ್ರಸ್ತುತ ಇದರ ಬಡ್ಡಿದರವು 7.5% ಆಗಿದ್ದು, ಇದು ಅನೇಕ ಬ್ಯಾಂಕುಗಳ ಸ್ಥಿರ ಠೇವಣಿಗಳಿಗಿಂತ (FD) ಹೆಚ್ಚು ಆಕರ್ಷಕವಾಗಿದೆ. ಹೂಡಿಕೆಯ ವಿಷಯಕ್ಕೆ ಬಂದರೆ, ನೀವು ಕನಿಷ್ಠ 1,000 ರೂಪಾಯಿಗಳಿಂದ ನಿಮ್ಮ ಖಾತೆಯನ್ನು ತೆರೆಯಬಹುದು. ಹಾಗೆಯೇ, ಈ ಯೋಜನೆಯಲ್ಲಿ ಹೂಡಿಕೆಗೆ ಯಾವುದೇ ಗರಿಷ್ಠ ಮಿತಿ ಇಲ್ಲ.
ಇದನ್ನೂ ಓದಿ : ಗುಜರಾತ್ ವಿರುದ್ಧದ ಭರ್ಜರಿ ಗೆಲುವಿನ ‘ನಿಜವಾದ ಹೀರೊ’ ಪಡಿಕ್ಕಲ್ ಎಂದ ಕೊಹ್ಲಿ!



















