ನವದೆಹಲಿ : ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಯಾವ ಕೈಗಳು ವಿಶ್ವಾಸದಿಂದ ಆಶ್ರಯ ನೀಡಿದ್ದವೋ, ಅದೇ ಕೈಗಳು ಇದೀಗ ಅವರಿಗೆ ದ್ರೋಹ ಬಗೆದಿವೆ ಎಂಬ ಆರೋಪ ಕೇಳಿಬಂದಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದು 2024ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಒಂದು ವರ್ಷಕ್ಕೂ ಹೆಚ್ಚು ಕಾಲ ಕೇಜ್ರಿವಾಲ್ ಮತ್ತು ಅವರ ಕುಟುಂಬಕ್ಕೆ ತಮ್ಮ ಅಧಿಕೃತ ನಿವಾಸದಲ್ಲಿ ಆಶ್ರಯ ನೀಡಿದ್ದ ಎಎಪಿ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರು ಇದೀಗ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಚ್ಚರಿಯೆಂದರೆ, ಕೇಜ್ರಿವಾಲ್ ಅವರು ಮಿತ್ತಲ್ ಅವರ ಮನೆಯನ್ನು ಖಾಲಿ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಮಹತ್ವದ ಹಾಗೂ ನಾಟಕೀಯ ರಾಜಕೀಯ ಬೆಳವಣಿಗೆ ನಡೆದಿದೆ.
ಹೊಸ ನಿವಾಸಕ್ಕೆ ಕೇಜ್ರಿವಾಲ್ ಶಿಫ್ಟ್, ಬೆನ್ನಲ್ಲೇ ಬಿಗ್ ಟ್ವಿಸ್ಟ್
ರಾಷ್ಟ್ರೀಯ ಪಕ್ಷದ ನಾಯಕನ ಸ್ಥಾನಮಾನದ ಆಧಾರದ ಮೇಲೆ ಕೇಂದ್ರ ಸರ್ಕಾರವು ದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಟೈಪ್-7 ಸರ್ಕಾರಿ ಬಂಗಲೆಯನ್ನು ಕೇಜ್ರಿವಾಲ್ ಅವರಿಗೆ ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ, ಏಪ್ರಿಲ್ 24ರಂದು ಮಂಡಿ ಹೌಸ್ ಬಳಿಯ 5 ಫಿರೋಜ್‌ಶಾ ರಸ್ತೆಯಲ್ಲಿದ್ದ ಮಿತ್ತಲ್ ಅವರ ನಿವಾಸದಿಂದ ಕೇಜ್ರಿವಾಲ್ ತಮ್ಮ ಹೊಸ ಬಂಗಲೆಗೆ ವಾಸ್ತವ್ಯ ಬದಲಾಯಿಸಿದ್ದರು.
ಆದರೆ, ಅವರು ಮನೆ ಖಾಲಿ ಮಾಡಿದ ಕೆಲವೇ ಗಂಟೆಗಳಲ್ಲಿ ಅಶೋಕ್ ಮಿತ್ತಲ್ ಆಪ್‌ಗೆ ರಾಜೀನಾಮೆ ನೀಡಿ ಬದ್ಧ ವೈರಿ ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆ. ಮಿತ್ತಲ್ ಅವರೊಂದಿಗೆ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ರಾಘವ್ ಛಡ್ಡಾ, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ಸಂದೀಪ್ ಪಾಠಕ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಕೂಡ ಕಮಲದ ತೆಕ್ಕೆಗೆ ಬಿದ್ದಿದ್ದಾರೆ. ಈ ಸಾಮೂಹಿಕ ವಲಸೆಯು ಎಎಪಿ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಎಎಪಿ ಪಾಳಯದಲ್ಲಿ ಭಿನ್ನಮತ
ಕಳೆದ ಕೆಲವು ಸಮಯದಿಂದ ಆಮ್ ಆದ್ಮಿ ಪಕ್ಷದೊಳಗೆ ನಾಯಕತ್ವದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿತ್ತು. ಏಪ್ರಿಲ್ 2ರಂದು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಸ್ಥಾನದಿಂದ ರಾಘವ್ ಛಡ್ಡಾ ಅವರನ್ನು ವಜಾಗೊಳಿಸಿ ಆ ಜಾಗಕ್ಕೆ ಅಶೋಕ್ ಮಿತ್ತಲ್ ಅವರನ್ನು ನೇಮಿಸಲಾಗಿತ್ತು. ಪಕ್ಷವು ತಮ್ಮ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂಬುದು ಛಡ್ಡಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಪಕ್ಷಾಂತರ ನಿಷೇಧ ಕಾಯ್ದೆಯಡಿ ರಾಜ್ಯಸಭಾ ಸದಸ್ಯತ್ವ ಅನರ್ಹಗೊಳ್ಳುವುದನ್ನು ತಪ್ಪಿಸಲು, ಕನಿಷ್ಠ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಅಗತ್ಯವಿರುವ ಕಾರಣ ಛಡ್ಡಾ ಅವರು ಇತರ ಸದಸ್ಯರನ್ನು ಒಗ್ಗೂಡಿಸಿ ಈ ಬಂಡಾಯದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, 2024ರ ಮೇ ತಿಂಗಳಲ್ಲಿ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಂದ ಹಲ್ಲೆಗೊಳಗಾದ ಆರೋಪ ಮಾಡಿದ್ದ ಸ್ವಾತಿ ಮಲಿವಾಲ್ ಅವರ ಪಕ್ಷಾಂತರ ಬಹುತೇಕ ನಿರೀಕ್ಷಿತವೇ ಆಗಿತ್ತು.
ವಿಫಲವಾದ ಕೇಜ್ರಿವಾಲ್ ಕೊನೆಯ ಪ್ರಯತ್ನ
ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಅರವಿಂದ್ ಕೇಜ್ರಿವಾಲ್ ಅವರು ಕೊನೆಯ ಹಂತದ ಕಸರತ್ತು ನಡೆಸಿದ್ದರು. ಅಸಮಾಧಾನಗೊಂಡಿರುವ ನಾಯಕರ ಪೈಕಿ ಕನಿಷ್ಠ ಐದು ಜನರಿಗೆ ಮುಂದಿನ ಅವಧಿಗೆ ಟಿಕೆಟ್ ನೀಡುವ ಭರವಸೆಯನ್ನು ಅವರು ನೀಡಿದ್ದರು. “ನಿಮಗೆ ಯಾವುದೇ ಆತಂಕವಿದ್ದರೆ ಈಗಲೇ ಹುದ್ದೆಗಳಿಗೆ ರಾಜೀನಾಮೆ ನೀಡಿ, ಮುಂದಿನ ಬಾರಿ ಖಂಡಿತಾ ಟಿಕೆಟ್ ನೀಡಲಾಗುವುದು” ಎಂದು ಮನವೊಲಿಸುವ ಯತ್ನ ಮಾಡಿದ್ದರು. ಈ ಕುರಿತು ಅಂತಿಮ ಸುತ್ತಿನ ಚರ್ಚೆ ನಡೆಸಲು ಶುಕ್ರವಾರ ಸಂಜೆ ತಮ್ಮ ನಿವಾಸಕ್ಕೆ ಆಗಮಿಸುವಂತೆ ಬಂಡಾಯ ಸಂಸದರಿಗೆ ಬುಲಾವ್ ಕೂಡ ನೀಡಿದ್ದರು. ಆದರೆ, ಈ ಸಭೆ ನಡೆಯುವ ಮುನ್ನವೇ ಎಲ್ಲಾ ಏಳು ಮಂದಿ ಸಂಸದರು ಎಎಪಿಗೆ ಗುಡ್‌ಬೈ ಹೇಳುವ ಮೂಲಕ ಕೇಜ್ರಿವಾಲ್ ಅವರ ಒಗ್ಗಟ್ಟಿನ ಯತ್ನವನ್ನು ಬುಡಮೇಲು ಮಾಡಿದ್ದಾರೆ.
ಇದನ್ನೂ ಓದಿ : SSLC ರಿಸಲ್ಟ್‌ನಲ್ಲಿ ಕಲಬುರಗಿಗೆ ಕೊನೇ ಸ್ಥಾನ – ಟೀಕಿಸಿದ BJP-JDS ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ!



















