ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಭಯಾನಕ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಮೋಹನ್ ಕುಮಾರ್ ಅವರಿಗೆ ಸೇರಿದ ಮನೆಯಲ್ಲಿ ನಿನ್ನೆ ಸಂಜೆ ಬೆಂಕಿ ತಗುಲಿದ ಪರಿಣಾಮ ಈ ಅವಘಡ ನಡೆದಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಫೋಟದ ಭೀಕರತೆ ಸ್ಪಷ್ಟವಾಗಿ ಕಾಣಿಸಿದೆ.
ಮನೆಗೆ ತಗುಲಿದ ಬೆಂಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೆಂಕಿ ಮುಗಿಲೆತ್ತರಕ್ಕೆ ಚಿಮ್ಮಿದ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿವೆ.
ಸ್ಫೋಟವಾಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಭಯಭೀತರಾಗಿ ಓಡಿಹೋಗಿದ್ದಾರೆ. ಘಟನೆ ನಡೆದ ವೇಳೆಯಲ್ಲಿ ಮೋಹನ್ ಕುಮಾರ್ ಕುಟುಂಬ ತರೀಕೆರೆ ಪಟ್ಟಣಕ್ಕೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳೀಯರು ಬೆಂಕಿ ಆರಿಸುವ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ತಮಿಳುನಾಡಲ್ಲಿ ಭೀಕರ ದುರಂತ : 13ನೇ ಹೇರ್‌ಪಿನ್ ತಿರುವಿನಲ್ಲಿ ಉರುಳಿದ ಬಸ್.. 9 ಶಿಕ್ಷಕರ ದುರ್ಮರಣ!



















