ಬೀದರ್ : ಡಾ.ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಮತ್ತು ಬಸವಣ್ಣನವರ ಫೋಟೋ ಅಳವಡಿಸಿರುವ ಕಟ್ಟೆ ತೆರೆವುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ದಲಿತ ಸಮುದಾಯ ಮತ್ತು ಬಸವಣ್ಣನ ಭಕ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ಘಟನೆ ಬೀದರ್‌ನ ಭಾಲ್ಕಿ ತಾಲೂಕಿನ ಭಾತಂಬ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ ಸುಮಾರು 25 ವರ್ಷಗಳಿಂದ ಅಸ್ತಿತ್ವದಲ್ಲಿರುವ ಅಂಬೇಡ್ಕರ್ ಪ್ರತಿಮೆ ಇರುವ ವೃತ್ತವನ್ನು ತಾಲೂಕು ಆಡಳಿತ ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿದೆ.
ಗ್ರಾಮಸ್ಥರ ಪ್ರಕಾರ, ಅದೇ ಪ್ರದೇಶದಲ್ಲಿ ಇತ್ತೀಚೆಗೆ ಬಸವೇಶ್ವರ ಮತ್ತು ಶಿವಾಜಿ ಮೂರ್ತಿಗಳನ್ನು ರಸ್ತೆ ಮೇಲೆಯೇ ಸ್ಥಾಪಿಸಲಾಗಿತ್ತು. ನಂತರ ಅವುಗಳನ್ನು ಆಡಳಿತ ತೆರವುಗೊಳಿಸಿದ ಬಳಿಕ, ಇತರ ಸಮುದಾಯದವರು ಅಂಬೇಡ್ಕರ್ ಮೂರ್ತಿಯನ್ನೂ ತೆರವುಗೊಳಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ದಲಿತ ಮುಖಂಡರು, ಅಂಬೇಡ್ಕರ್ ಪ್ರತಿಮೆ ಹಲವು ವರ್ಷಗಳಿಂದ ಇದ್ದು ಪಂಚಾಯತ್ ದಾಖಲೆಗಳಲ್ಲಿಯೂ ಇರಬಹುದು ಎಂದು ಹೇಳಿ, ಯಾವುದೇ ಕಾರಣಕ್ಕೂ ತೆರವುಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಇದರಿಂದ ಭಾಲ್ಕಿ-ಹುಲಸೂರ್-ಬಸವಕಲ್ಯಾಣ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : RCB ವಿರುದ್ಧದ ಪಂದ್ಯಕ್ಕೂ ಮುನ್ನ ಆಕಿಬ್ ನಬಿಗೆ ಬೆಂಬಲ ಸೂಚಿಸಿದ ಡೆಲ್ಲಿ ಕೋಚ್!


















