ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮಂಡಿಸಿದ್ದ ಪ್ರಸಕ್ತ ಸಾಲಿನ ಬಜೆಟ್‌ಗಳಿಗೆ ರಾಜ್ಯ ಸರ್ಕಾರ ಸಣ್ಣಪುಟ್ಟ ತಿದ್ದುಪಡಿ ಹಾಗೂ ನಿರ್ದೇಶನಗಳೊಂದಿಗೆ ಅನುಮೋದನೆ ನೀಡಿದೆ.
ಗ್ರೇಟರ್ ಬೆಂಗಳೂರು ಕಾಯ್ದೆ 2024ರ ಕಲಂ 184 ಅನ್ವಯ 2026–27ನೇ ಸಾಲಿನ ಆಯವ್ಯಯ ಹಾಗೂ 2025–26ನೇ ಸಾಲಿನ ಪರಿಷ್ಕೃತ ಆಯವ್ಯಯಕ್ಕೆ ಸರ್ಕಾರ ಒಪ್ಪಿಗೆ ನೀಡಿರುವುದಾಗಿ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ರಾಜ್ಯದ ವಿಶೇಷ ಮೂಲಭೂತ ಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ 2026–27ನೇ ಸಾಲಿಗೆ 3000 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ 2,199.99 ಕೋಟಿ ಅನುದಾನವನ್ನು ಐದು ನಗರ ಪಾಲಿಕೆಗಳಿಗೆ ಕೆಳಕಂಡಂತೆ ಹಂಚಿಕೆ ಮಾಡಲಾಗಿದೆ.
- ಬೆಂಗಳೂರು ಪೂರ್ವ: ₹298.10 ಕೋಟಿ
- ಬೆಂಗಳೂರು ಪಶ್ಚಿಮ: ₹667.74 ಕೋಟಿ
- ಬೆಂಗಳೂರು ಉತ್ತರ: ₹429.20 ಕೋಟಿ
- ಬೆಂಗಳೂರು ದಕ್ಷಿಣ: ₹429.27 ಕೋಟಿ
- ಬೆಂಗಳೂರು ಕೇಂದ್ರ: ₹375.61 ಕೋಟಿ
ಉಳಿದ 800.01 ಕೋಟಿಯಲ್ಲಿ, ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ 600 ಕೋಟಿ ಬಿ-ಸೆಲ್ ಸಂಸ್ಥೆಗೆ ಮತ್ತು 200.01 ಕೋಟಿ ಬಿಎಸ್‌ಡಬ್ಲ್ಯೂಎಂಎಲ್‌ಗೆ ಹಂಚಿಕೆ ಮಾಡಲಾಗಿದೆ. ಇದಲ್ಲದೆ, ಮುಖ್ಯಮಂತ್ರಿ ವಿಶೇಷ ಅನುದಾನದಡಿ ಹಿಂದಿನ ಬಿಬಿಎಂಪಿಗೆ ಅನುಮೋದನೆ ನೀಡಲಾಗಿದ್ದ 250 ಕೋಟಿ ಕ್ರಿಯಾ ಯೋಜನೆಯ ಅನುದಾನವನ್ನು ಐದು ಪಾಲಿಕೆಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಇದರ ಭಾಗವಾಗಿ 175 ಕೋಟಿ ಈಗಾಗಲೇ ಬಿಡುಗಡೆಗೊಂಡಿದ್ದು, ಇನ್ನಷ್ಟು 50 ಕೋಟಿ 2026–27ರಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.
ಅನುದಾನ ಬಿಡುಗಡೆ ಕುರಿತು, ವರ್ಷಾಂತ್ಯದವರೆಗೆ ಕಾಯದೇ ಪ್ರತಿ ತಿಂಗಳು ಆದಾಯದ ಆಧಾರದ ಮೇಲೆ ಹನ್ನೆರಡರಲ್ಲಿ ಒಂದು ಭಾಗವನ್ನು ಬಿಡುಗಡೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.
ಇದನ್ನೂ ಓದಿ : ಕಾವಾಡಿಗನ ಮೇಲೆಯೇ ದಾಳಿ ಮಾಡಿದ ಸಾಕಾನೆ ಸುಗ್ರೀವ!



















