ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 21 ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಶಾಸಕ ವಿನಯ್ ಕುಲಕರ್ಣಿ ಸೇರಿ 21 ಆರೋಪಿಗಳ ಪೈಕಿ 19 ಮಂದಿ ಆರೋಪಿಗಳನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ (ಏ.15) ತೀರ್ಪು ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ ಹೋಗಬೇಕಿದ್ದು, ನಾಳೆ (ಏಪ್ರಿಲ್ 16) ಶಿಕ್ಷೆ ಪ್ರಮಾಣದ ಬಗ್ಗೆ ವಾದಮಂಡನೆ ನಡೆಯಲಿದೆ. ಬಳಿಕ ಕೋರ್ಟ್ ಶಿಕ್ಷೆ ಪ್ರಮಾಣವನ್ನೂ ಸಹ ಪ್ರಕಟಿಸಲಿದೆ.

ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಕೊನೆಗೂ ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಅಪರಾಧಿಯಾಗಿದ್ದಾರೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಲಯವು ಏಪ್ರಿಲ್ 9ರಂದು ತೀರ್ಪು ಪ್ರಕಟಿಸುವುದಾಗಿ ಮೊದಲು ತಿಳಿಸಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ತೀರ್ಪು ರಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.
ಕೊಲೆ ಆರೋಪಿಗಳ ಜೊತೆ ವಿನಯ್‌ಕುಲಕರ್ಣಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಒಟ್ಟು 3 ಚಾರ್ಜ್‌ಶೀಟ್‌ಗಳು ಸಲ್ಲಿಕೆಯಾಗಿದ್ದು, 113 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 40 ಜನ ಸಾಕ್ಷಿಗಳ ವಿಡಿಯೋ ಹೇಳಿಕೆ ದಾಖಲಿಸಲಾಗಿದೆ. ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ನ್ಯಾಯಾಲಯಕ್ಕೆ ಕುಲಕರ್ಣಿ ಆಗಮಿಸಿದ್ದರು. ಧಾರವಾಡದಿಂದ ಬೆಂಬಲಿಗರು ಕೂಡ ಆಗಮಿಸಿದ್ದರು.
21 ಆರೋಪಿಗಳ ಪಟ್ಟಿ ಇಂತಿದೆ
A1 – ಬಸವರಾಜ್ ಮುತ್ತಗಿ, A2 – ವಿಕ್ರಂ ಬಳ್ಳಾರಿ, A3 – ಕೀರ್ತಿ ಕುಮಾರ್, A4 – ಸಂದೀಪ್, A5 – ವಿನಾಯಕ್, A6 – ಮಹಾಬಲೇಶ್ವರ, A7 – ಸಂತೋಷ್, A8 – ದಿನೇಶ್, A9 – ಅಶ್ವಥ್, A10 – ಸುನೀಲ್ ಕೆ.ಎಸ್, A11 – ನಜರ್ ಅಹಮದ್, A12 – ಶಹನವಾಜ್, A13 – ನೂತನ್, A14 – ಹರ್ಷಿತ್, A15 – ವಿನಯ್ ಕುಲಕರ್ಣಿ, A16 – ಚಂದ್ರಶೇಖರ್ ಇಂಡಿ , A17 – ಶಿವಾನಂದ್ ಶ್ರೀಶೈಲ ಬಿರಾದರ್, A18 – ವಿಕಾಸ್ ಕಲಬುರ್ಗಿ, A19 – ಚೆನ್ನಕೇಶವ ಟಿಂಗರಿಕರ್, A20 – ವಾಸುದೇವ್ ನಿಲೇಕಣಿ , A21 – ಸೋಮಶೇಖರ್ ಬಸಪ್ಪ ನ್ಯಾಮಗೌಡ
ಇದನ್ನೂ ಓದಿ : ಅಕ್ರಮ ಪ್ಲಾಸ್ಟಿಕ್ ಸಂಗ್ರಹಣೆ – ವ್ಯಾಪಾರಿಗೆ ಬಿತ್ತು 2 ಲಕ್ಷ ದಂಡ!


















