ಶಿವಮೊಗ್ಗ: ಡಾ. ಸಮೀಕ್ಷಾ ಸಾವಿಗೆ ಕಾರಣವಾಗಿದ್ದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ ಹಂಸಿಣಿ ಎಂಬ ನೀರಾನೆ ಆರೋಗ್ಯ ಸ್ಥಿತಿ ಇದೀಗ ಗಂಭೀರವಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 12 ವರ್ಷದ ಹಂಸಿಣಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಏಪ್ರಿಲ್ 10ರಂದು ಪಶುವೈದ್ಯರ ತಂಡ ಅರವಳಿಕೆ ಮದ್ದು ನೀಡಿ ಸಮಗ್ರ ಆರೋಗ್ಯ ತಪಾಸಣೆ ನಡೆಸಿತ್ತು.

ಈ ವೇಳೆ ರಕ್ತ ಸೇರಿದಂತೆ ವಿವಿಧ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಲಭ್ಯವಾದ ವರದಿಗಳ ಪ್ರಕಾರ, ಹಂಸಿಣಿಯ ಗರ್ಭಕೋಶದಲ್ಲಿ ತೀವ್ರವಾದ ಸೋಂಕು ಇರುವುದಾಗಿ ದೃಢಪಟ್ಟಿದೆ. ಇದರ ಪರಿಣಾಮವಾಗಿ ದೇಹದ ಇತರೆ ಅಂಗಾಂಗಗಳಿಗೂ ಹಾನಿ ಉಂಟಾಗಿದೆ.
ಪಶುವೈದ್ಯರ ಪ್ರಾಥಮಿಕ ಶಂಕೆಯ ಪ್ರಕಾರ, ಗರ್ಭದಲ್ಲಿದ್ದ ಮರಿ ಮೃತಪಟ್ಟಿರುವುದರಿಂದ ಗರ್ಭಕೋಶದಲ್ಲಿ ಸೋಂಕು ಉಂಟಾಗಿರಬಹುದು ಎಂದು ಹೇಳಲಾಗಿದೆ. ಪ್ರಸ್ತುತ ಹಂಸಿಣಿ ಬಹುಅಂಗಾಂಗ ಸೋಂಕು ಹಾಗೂ ತೀವ್ರ ನಿಶಕ್ತಿಯಿಂದ ಬಳಲುತ್ತಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.
ಮೃಗಾಲಯದ ವತಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆ ಹಾಗೂ ಸೂಕ್ತ ಲಾಲನೆ-ಪಾಲನೆ ನೀಡಲಾಗುತ್ತಿದೆ ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅಮಾರಕ್ಷರ ತಿಳಿಸಿದ್ದಾರೆ.
ಇದನ್ನೂ ಓದಿ : ಜಿಬಿಎ ಚುನಾವಣೆ ಮತ್ತಷ್ಟು ವಿಳಂಬ ಸಾಧ್ಯತೆ – ಸರ್ಕಾರಕ್ಕೆ ಪತ್ರ ಬರೆಯಲು ಆಯುಕ್ತರ ಚಿಂತನೆ



















