ಬೆಂಗಳೂರು : ಖಾಸಗಿ ಬಸ್ ಒಂದು ಹೈವೇಯಿಂದ ರಸ್ತೆ ಬದಿಯ ಜಮೀನಿಗೆ ನುಗ್ಗಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮುದುಗೆರೆ ಗ್ರಾಮದ ಬಳಿ ಸಂಭವಿಸಿದೆ.
ಮುಂದೆ ಸಾಗುತ್ತಿದ್ದ ಲಾರಿ ಏಕಾಏಕಿ ಯು-ಟರ್ನ್ ತೆಗೆದುಕೊಳ್ಳಲು ಬ್ರೇಕ್ ಹಾಕಿದ ಹಿನ್ನೆಲೆ, ಹಿಂಬದಿಯಿಂದ ಅಪಘಾತ ತಪ್ಪಿಸಲು ಚಾಲಕ ದಿಢೀರ್ ಎಡಭಾಗಕ್ಕೆ ಬಸ್ ತಿರುಗಿಸಿದ್ದಾನೆ. ಪರಿಣಾಮವಾಗಿ ಬಸ್ ಹೈವೇಯಿಂದ ನೇರವಾಗಿ ಜಮೀನಿಗೆ ನುಗ್ಗಿ ಸುಮಾರು 100 ಮೀಟರ್ ಮುಂದೆ ಸಾಗಿದ ಬಳಿಕ ನಿಂತಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ಬಸ್ ಜಮೀನಿನ ಪಕ್ಕದಲ್ಲಿದ್ದ ಬೃಹತ್ ಬಾವಿಗೆ ಬೀಳುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಆಂಧ್ರ ಪ್ರದೇಶದ ಕದಿರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಶ್ರೀ ವೆಂಕಟೇಶ್ವರ ಎಂಬ ಹೆಸರಿನ ಬಸ್ ಅಪಘಾತಕ್ಕೊಳಗಾದ ಬಸ್ ಆಗಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಸಂಬಂಧ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ತಿಂಗಳಿಗೆ 100 ರೂ. ಪಾವತಿಸಿದರೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ : ಏನಿದು ಸ್ಕೀಮ್?



















