ಗುವಾಹಟಿ : ಪ್ರಸಕ್ತ ಐಪಿಎಲ್ (IPL 2026) ಟೂರ್ನಿಯಲ್ಲಿ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಲೇ ಸದ್ದು ಮಾಡುತ್ತಿರುವ ರಾಜಸ್ಥಾನ್ ರಾಯಲ್ಸ್ (RR) ತಂಡ ಇದೀಗ ಮೈದಾನದ ಹೊರಗಿನ ವಿವಾದವೊಂದಕ್ಕೆ ಗುರಿಯಾಗಿದೆ. ಶುಕ್ರವಾರ ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ (Romi Bhinder) ಅವರು ಡಗೌಟ್‌ನಲ್ಲಿ ನಿಂತು ಮೊಬೈಲ್ ಫೋನ್ ಬಳಸುವ ಮೂಲಕ ‘ಭ್ರಷ್ಟಾಚಾರ ನಿಗ್ರಹ’ (Anti-corruption) ನಿಯಮಗಳನ್ನು ಉಲ್ಲಂಘಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ವಿಡಿಯೊದಲ್ಲಿ ಏನಿದೆ?
ಆರ್‌ಸಿಬಿ ನೀಡಿದ್ದ 202 ರನ್‌ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಬೆನ್ನಟ್ಟುತ್ತಿದ್ದಾಗ (11ನೇ ಓವರ್‌ನಲ್ಲಿ), ಯುವ ಆಟಗಾರ ವೈಭವ್ ಸೂರ್ಯವಂಶಿ ಔಟಾದ ಬಳಿಕ ಈ ಘಟನೆ ನಡೆದಿದೆ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಮತ್ತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಡಗೌಟ್‌ನಲ್ಲಿ ನಿಂತು ತಮ್ಮ ಮೊಬೈಲ್ ಫೋನ್‌ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಅವರ ಪಕ್ಕದಲ್ಲೇ ನಿಂತಿದ್ದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಆ ಫೋನ್ ಸ್ಕ್ರೀನ್ ಕಡೆಗೆ ಇಣುಕಿ ನೋಡುತ್ತಿರುವುದು ವಿಡಿಯೊದಲ್ಲಿದೆ. ವಿಶೇಷವೆಂದರೆ, ಟೂರ್ನಿಯುದ್ದಕ್ಕೂ ಯುವ ಆಟಗಾರ ವೈಭವ್‌ಗೆ ರೋಮಿ ಭಿಂದರ್ ಅವರೇ ಸ್ಥಳೀಯ ಪೋಷಕ (Local Guardian) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಸಿಸಿಐ ನಿಯಮ ಏನು ಹೇಳುತ್ತದೆ?
ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ (ACU) ಮತ್ತು ‘ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳ ಪ್ರದೇಶ’ (PMOA – Players and Match Officials Area) ನಿಯಮಗಳ ಪ್ರಕಾರ, ಡಗೌಟ್‌ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಂವಹನ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತಂಡದ ಮ್ಯಾನೇಜರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಫೋನ್ ಬಳಸಲು ಅವಕಾಶವಿದೆಯೇ ಹೊರತು ಡಗೌಟ್‌ನಲ್ಲಿ ಬಳಸುವಂತಿಲ್ಲ ಎಂಬುದು ಐಪಿಎಲ್ 2026ರ ಅಧಿಕೃತ ಶಿಷ್ಟಾಚಾರದಲ್ಲೂ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಲಲಿತ್ ಮೋದಿ ಆಕ್ರೋಶ
ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಐಪಿಎಲ್‌ನ ಮಾಜಿ ಕಮಿಷನರ್ ಲಲಿತ್ ಮೋದಿ ಅವರು X (ಹಿಂದಿನ ಟ್ವಿಟರ್) ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸಲು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ಹೇಗೆ ಅವಕಾಶ ನೀಡಿದರು? ನಿಯಮಗಳ ಉಲ್ಲಂಘನೆಯ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಮುಂದೇನು? ಬ್ಯಾನ್ ಆಗುತ್ತಾ?
ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ಹೌದು, ಭಿಂದರ್ ಅವರು PMOA ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಪಂದ್ಯದ ವೇಳೆ ಡಗೌಟ್‌ನಲ್ಲಿ ಸೆಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದಿರಬಹುದು, ಆದರೆ ನಿಯಮ ಉಲ್ಲಂಘನೆಯಾಗಿರುವುದರಿಂದ ಕ್ರಮ ಅನಿವಾರ್ಯ. ಅವರಿಗೆ ಕೇವಲ ಎಚ್ಚರಿಕೆ ನೀಡಬೇಕೇ ಅಥವಾ ಪಂದ್ಯದ ನಿಷೇಧ (Ban) ವಿಧಿಸಬೇಕೇ ಎಂಬುದನ್ನು ಪಂದ್ಯದ ರೆಫರಿ ಮತ್ತು ACU ವರದಿಯ ಆಧಾರದ ಮೇಲೆ ಐಪಿಎಲ್ ಆಡಳಿತ ಮಂಡಳಿ (IPL GC) ನಿರ್ಧರಿಸಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತಾದರೂ, ಮ್ಯಾನೇಜರ್‌ನ ಈ ಯಡವಟ್ಟು ತಂಡಕ್ಕೆ ಮುಜುಗರ ತಂದೊಡ್ಡಿದೆ.
ಇದನ್ನೂ ಓದಿ : ಹೆಬ್ಬಾಳ ಸರ್ಕಾರಿ ಶಾಲೆಯ ಸ್ನೇಹಿತರ ಬಳಗದಿಂದ ‘ಮರಳಿ ಬಾಲ್ಯಕ್ಕೆ-2026’ ಕಾರ್ಯಕ್ರಮ ಯಶಸ್ವಿ!



















