ಬೆಂಗಳೂರು : ಬೆಂಗಳೂರಿನ ವಸಂತನಗರದಲ್ಲಿರುವ ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಹೆಬ್ಬಾಳ ಸರ್ಕಾರಿ ಶಾಲೆಯ ಸ್ನೇಹಿತರ ಬಳಗದಿಂದ “ಮರಳಿ ಬಾಲ್ಯಕ್ಕೆ-2026” ಕಾರ್ಯಕ್ರಮವನ್ನು ಕಳೆದ ಶನಿವಾರ (ಏ.11) ಅದ್ದೂರಿಯಾಗಿ ಆಚರಿಸಲಾಯಿತು.
1989ರಿಂದ 1999ರವರೆಗೆ ಒಂದೇ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಹಲವು ವರ್ಷಗಳ ನಂತರ ಮತ್ತೆ ಒಂದೇ ವೇದಿಕೆಯಲ್ಲಿ ಸೇರಿ ಬಾಲ್ಯದ ಸವಿ ನೆನಪುಗಳನ್ನು ಹಂಚಿಕೊಂಡು ಸಂತಸದ ಕ್ಷಣಗಳನ್ನು ಕಳೆದರು.

ಗುರುವಂದನ ಮತ್ತು ಸ್ನೇಹ ಸಮ್ಮಿಲನ
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ, ಪ್ರಾರ್ಥನೆಯ ಮೂಲಕ ಉದ್ಘಾಟನೆ ಮಾಡಲಾಯಿತು. ನಂತರ ಗುರು ಸ್ಮರಣೆಯಾಗಿ ಅಕ್ಷರ ಕಲಿಸಿದ ಗುರುಗಳ ಪಾದಪೂಜೆ ಹಾಗೂ ವಿಶೇಷ ಸನ್ಮಾನ ನೆರವೇರಿಸಲಾಯಿತು. ಅವರ ಮಾರ್ಗದರ್ಶನ ಹಾಗೂ ಶಿಕ್ಷಣಕ್ಕೆ ನೀಡಿದ ಕೊಡುಗೆಗಳನ್ನು ಕೃತಜ್ಞತೆಯಿಂದ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಹಳೆಯ ಸ್ನೇಹಿತರು ತಮ್ಮ ಶಾಲಾ ದಿನಗಳ ಅನುಭವಗಳು, ತರಗತಿಯ ನೆನಪುಗಳು ಹಾಗೂ ಗುರುಗಳ ಜೊತೆಗಿನ ಕ್ಷಣಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಬಳಿಕ ಸಹಭೋಜನ ಏರ್ಪಡಿಸಲಾಗಿದ್ದು, ಎಲ್ಲರೂ ಜೊತೆಗಯಾಗಿ ಕುಳಿತುಕೊಂಡು ಊಟ ಮಾಡುತ್ತ ಬಾಲ್ಯದ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.
ಸ್ನೇಹ, ಗುರುಗಳ ಮೇಲಿನ ಗೌರವ ಹಾಗೂ ಬಾಲ್ಯದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ ಈ “ಮರಳಿ ಬಾಲ್ಯಕ್ಕೆ-2026” ಕಾರ್ಯಕ್ರಮ ಎಲ್ಲರಿಗೂ ಮರೆಯಲಾಗದ ಕ್ಷಣವಾಗಿ ಉಳಿಯಿತು.
ಇದನ್ನೂ ಓದಿ : ಉಡುಪಿ : 43ನೇ ವಯಸ್ಸಿನಲ್ಲಿ ಪಿಯುಸಿ ಪಾಸಾದ ರಿಕ್ಷಾ ಚಾಲಕ


















