ಬೆಂಗಳೂರು: ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವ ನಡುವೆಯೇ ಸಾಕು ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೂ ಹೊಸ ಉದಾಹರಣೆ ಸಿಕ್ಕಿದೆ. ಅವರೆಹಳ್ಳಿಯಲ್ಲಿ ಪಕ್ಕದ ಮನೆಯ ನಾಯಿಯು ತನ್ನ ಹೆಂಡತಿಯನ್ನು ಕಂಡು ಬೊಗಳಿತ್ತೆಂದು ವ್ಯಕ್ತಿಯೊಬ್ಬ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.
ವ್ಯಾಪಾರಿ ಅಂಜನಪ್ಪ ಅವರಿಗೆ ಸೇರಿದ 6 ವರ್ಷದ ‘ಸ್ಕೂಬಿ’ ಎಂಬ ಸಾಕು ನಾಯಿ, ಪಕ್ಕದ ಮನೆಯ ಮಹಿಳೆಯನ್ನು ಕಂಡು ಬೊಗಳಿದೆ. ಇದರಿಂದ ಕೋಪಗೊಂಡ ಆಕೆಯ ಪತಿ ಗೋಪಿ, ಅಂಜನಪ್ಪ ಮನೆಯ ಆವರಣಕ್ಕೆ ನುಗ್ಗಿ, ಗೇಟ್ ಬಳಿ ಕಟ್ಟಿ ಇಟ್ಟಿದ್ದ ನಾಯಿಯನ್ನು ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಹಲ್ಲೆಯಿಂದ ಸ್ಕೂಬಿ ತಕ್ಷಣವೇ ಮೂರ್ಛೆ ಹೋಗಿದ್ದು, ಬಳಿಕ ಮಾಲೀಕರು ಅದನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನಾಯಿ ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿ ಗೋಪಿ ಪರಾರಿಯಾಗಿದ್ದು, ಘಟನೆ ವೇಳೆ ಆತ ಮದ್ಯದ ನಶೆಯಲ್ಲಿ ಇದ್ದನು ಎಂಬ ಆರೋಪವೂ ಕೇಳಿಬಂದಿದೆ.
ಆರೋಪಿಯ ಈ ಕ್ರೌರ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ – BMW ಸೇರಿದಂತೆ ನಾಲ್ಕೈದು ಐಷರಾಮಿ ಕಾರುಗಳು ಸುಟ್ಟು ಕರಕಲು!



















