ಬೆಂಗಳೂರು: ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ ಸಿಲುಕಿದ್ದ 28 ವರ್ಷದ ಜಿಮ್ ಟ್ರೈನರ್ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.
ದಿಲೀಪ್(28) ಮೃತ ಯುವಕ. ವಾಜರಹಳ್ಳಿಯಲ್ಲಿ ಫಿಟ್ನೆಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಜಿಮ್‌ನಲ್ಲಿ ಅವರಿಗೆ 42 ವರ್ಷದ ವಿವಾಹಿತ ಮಹಿಳೆಯೊಬ್ಬರ ಪರಿಚಯವಾಗಿದ್ದು, ಆಕೆ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಬಳಿಕ ಆ ಮಹಿಳೆ ದಿಲೀಪ್ ನನ್ನು ಬ್ಲಾಕ್‌ಮೇಲ್ ಮಾಡಲಾರಂಭಿಸಿದ್ದಾಳೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಮಹಿಳೆಯ ಬ್ಲಾಕ್‌ಮೇಲ್‌ನಿಂದ ಮಾನಸಿಕವಾಗಿ ನೊಂದ ದಿಲೀಪ್ ಈ ತೀವ್ರ ನಿರ್ಧಾರಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಸಾವಿಗೂ ಮುನ್ನ ದಿಲೀಪ್ ಸುನಿತಾ ಎಂಬ ಮಹಿಳೆಗೆ ಕರೆ ಮಾಡಿದ್ದು, ವಿಷಯ ತಿಳಿಸಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದೇ ವೇಳೆ, ದಿಲೀಪ್ ಜೊತೆ ಸಂಬಂಧದಲ್ಲಿದ್ದಳು ಎನ್ನಲಾದ ಮಹಿಳೆ ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರನಿಗೆ ಮೆಸೇಜ್ ಮಾಡಿ, “ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ತಿಳಿಸಿದ್ದಾಳೆ. ಇದರಿಂದ ಆತಂಕಗೊಂಡ ಸಹೋದರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಹಾಗೂ ಸೊಕೊ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್.. ಪತ್ನಿ ಅರೆಸ್ಟ್!


















