ಮೈಸೂರು : ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮಹಿಳೆಯ ಸ್ಥಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿದ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಮಹಿಳೆ ಮನೆಗೆ ಭೇಟಿ ನೀಡಿ, ಅವರಿಗೆ ಧೈರ್ಯ ಹಾಗೂ ನೆರವನ್ನು ನೀಡಿದ್ದಾರೆ.
ನಿನ್ನೆಯಿಂದ ಎರಡು ದಿನಗಳ ಕಾಲ ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದ ಸಚಿವರು ಇಂದು ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಹಾಗೂ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ನಂತರ ಅನಾರೋಗ್ಯ ಪೀಡಿತ ಮಹಿಳೆಯ ಮನೆಗೆ ಭೇಟಿ ನೀಡಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಶ್ರೀಮತಿ ಪೂಜಾ (24) ಅವರು ಬೆನ್ನು ನೋವು ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಆದರೆ, ಚಿಕಿತ್ಸೆಯ ನಂತರ ಅಡ್ಡ ಪರಿಣಾಮ ಉಂಟಾಗಿ ಎರಡು ಕಾಲುಗಳು ಶಕ್ತಿ ಕಳೆದುಕೊಂಡಿದ್ದವು. ಇದಾದ ನಂತರ ಅವರ ಕಾಲಿಗೆ ಆಪರೇಷನ್ ಮಾಡಿದರೂ ಶಕ್ತಿ ಬಂದಿಲ್ಲ. ಹೀಗಾಗಿ, ಗ್ರಾಮದಲ್ಲಿದ್ದ ತಂದೆಯ ಮನೆ ಹಾಗೂ ಜಮೀನನ್ನ ಮಾರಿ ಚಿಕಿತ್ಸೆ ಕೊಡಿಸಿದ್ದಾರೆ. ಇದಾದ ನಂತರವೂ ಅವರ ಆರೋಗ್ಯ ಸರಿಯಾಗದೇ ಹಾಸಿಗೆ ಹಿಡಿದಿದ್ದಾರೆ.
ಮತ್ತೊಂದು ಕಡೆ ಮಹಿಳೆಯ ಗಂಡ ರವಿ ಅವರೂ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡು ಅವರೂ ಹಾಸಿಗೆ ಹಿಡಿದಿದ್ದಾರೆ. ಅವರೂ ದುಡಿಯುವ ಶಕ್ತಿಯನ್ನ ಕಳೆದುಕೊಂಡಿದ್ದಾರೆ.
ಈ ಮಧ್ಯೆ ಬಾಡಿಗೆ ಮನೆಯಲ್ಲಿ ವಾಸವಿರುವ ಈ ಕುಟುಂಬಕ್ಕೆ ಬಾಡಿಗೆ ಕಟ್ಟಲು ಕಷ್ಟವಾಗಿದೆ. ಹೀಗಾಗಿ, ಮನೆಯ ಮಾಲೀಕ ಮನೆ ಖಾಲಿ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ, ಈ ಬಗ್ಗೆ ನೊಂದ ಕುಟುಂಬ ಮನೆಗೆ ಬಂದಿದ್ದ ಸಚಿವರ ಗಮನಕ್ಕೆ ತಂದಿದ್ದಾರೆ. ಅವರೀಗ ಕೂಡಲೇ ಆರ್ಥಿಕ ನೆರವು ಹಾಗೂ ಮನೆ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಕುಟುಂಬದ ಸ್ಥಿತಿಯ ಬಗ್ಗೆ ಜಾಲತಾಣದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿದ್ದ ಗ್ರಾಮದ ಯುವಕ ಚೇತನ್ ಅವರನ್ನ ಕರೆದು ಕೇಂದ್ರ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಕಷ್ಟದಲ್ಲಿರುವ ಕುಟುಂಬಕ್ಕೆ ಧನ ಸಹಾಯ ಹಾಗೂ ಮನೆ ಕೊಡಿಸುವ ಜೊತೆಗೆ ಆ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಬಗ್ಗೆಯೂ ಸ್ಥಳದಲ್ಲೇ ಭರವಸೆ ನೀಡಿ, ಸ್ಥಳೀಯ ಜೆಡಿಎಸ್ ಶಾಸಕರು ಹಾಗೂ ಮುಖಂಡರಿಗೆ ಆ ಜವಾಬ್ದಾರಿಯನ್ನ ವಹಿಸಿದ್ದಾರೆ.
ಹೀಗೆ ಜಾಲತಾಣದಲ್ಲಿ ಶೇರ್ ಆಗಿದ್ದ ಪೂಜಾ ಅವರ ಅನಾರೋಗ್ಯದ ವಿಡಿಯೋ ಈಗ ಕೇಂದ್ರ ಸಚಿವರ ಗಮನ ಸೆಳೆದು ಅವರ ಸಹಾಯಕ್ಕೆ ಬಂದಿದ್ದಾರೆ. ಜಾಲತಾಣದ ಶಕ್ತಿಗೆ ಈ ಘಟನೆ ನಿದರ್ಶನವಾಗಿದೆ.
ಇದನ್ನೂ ಓದಿ: ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್



















