ಬೀದರ್ : ಬೀದರ್‌ನಲ್ಲಿ ಬೀದಿನಾಯಿಗಳ ದಾಳಿ ಹೆಚ್ಚಾಗಿದ್ದು, ಪ್ರತಿನಿತ್ಯ ಜನರು ರಸ್ತೆಯಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಅಂತೆಯೇ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಚಾವುಸ್ ಗಲ್ಲಿಯಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಪರಿಣಾಮ ಇಬ್ಬರು ಮಕ್ಕಳಿಗೆ ಗಂಭೀರ ಗಾಯಗಳಾಗಿದೆ.
ಏಕಾಏಕಿ ಬಂದ ಎರಡು ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ ಮಕ್ಕಳು ಭಯದಿಂದ ಓಡಲು ಪ್ರಾರಂಭಿಸಿದ್ದಾರೆ. ಈ ವೇಳೆ ನಾಯಿಗಳು ಮಕ್ಕಳನ್ನು ಬೆನ್ನಟ್ಟಿದ್ದು, ಇಬ್ಬರು ಮಕ್ಕಳಿಗೆ ಕಚ್ಚಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ದಾಳಿಯಿಂದ ಹೆದರಿದ ಮಕ್ಕಳು ತಕ್ಷಣ ಮನೆಯೊಳಗೆ ಓಡಿ ಸೇರಿಕೊಂಡಿದ್ದಾರೆ. ಮಕ್ಕಳು ಮನೆಯೊಳಗೆ ಹೋಗುತ್ತಿದ್ದಂತೆಯೇ ನಾಯಿಗಳು ಅಲ್ಲಿಂದ ಓಡಿಹೋಗಿವೆ ಎಂದು ತಿಳಿದು ಬಂದಿದೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ನಗರಸಭೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸೈಕಲ್‌ನಲ್ಲಿ ಆಟವಾಡ್ತಿದ್ದ ಬಾಲಕನಿಗೆ ಸಾಕು ನಾಯಿ ಡೆಡ್ಲಿ ಅಟ್ಯಾಕ್


















