ಚಿಕ್ಕಬಳ್ಳಾಪುರ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ದಾಳಿ ಯತ್ನ ನಡೆದ ಘಟನೆ ಚಿನ್ನಸಂದ್ರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 3ರ ಬೆಳಗಿನ ಜಾವ 12.40ರ ಸುಮಾರಿಗೆ ಈ ಘಟನೆ ನಡೆದಿದೆ.
ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿಎಸ್‌ಐ ನಾಗಮ್ಮ ಹಾಗೂ ಜೀಪ್ ಚಾಲಕ ವೇಣುಗೋಪಾಲ್ ಅವರು ರಾತ್ರಿ ವೇಳೆ ತೆರೆಯಲಾಗಿದ್ದ ಹೋಟೆಲ್ ಬಗ್ಗೆ ಪ್ರಶ್ನಿಸಿದ ವೇಳೆ ಕೆಲವರು ಗಲಾಟೆ ಆರಂಭಿಸಿ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೆಂದು ಆರೋಪಿಸಲಾಗಿದೆ. ಪೊಲೀಸ್ ಅಧಿಕಾರಿ ಎಂಬುದನ್ನೂ ಲೆಕ್ಕಿಸದೇ ಪುಂಡರು ದೌರ್ಜನ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಆಲಂಬಗಿರಿಯ ನಾಗೇಂದ್ರ, ನವೀನ್, ಪುನೀತ್ ಹಾಗೂ ನರೇಂದ್ರ ವಿರುದ್ಧ ಪ್ರಕರಣ ದಾಖಲಾಗಿದೆಯಾದರೂ, ಘಟನೆಗೆ ಮೂರು ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ ಎಂಬುದು ಪ್ರಶ್ನೆಗೆ ಕಾರಣವಾಗಿದೆ. ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಯತ್ನ ನಡೆದಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ.
ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನಡೆಗೂ ಪ್ರಶ್ನೆಗಳು ಎದ್ದಿದ್ದು, ರಾಜಕೀಯ ಒತ್ತಡದ ಪರಿಣಾಮವೇ ಕ್ರಮ ನಿಧಾನವಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯ ಮತ್ತೊಂದು ಲವ್ ಜಿಹಾದ್ ಕೇಸ್‌ಗೆ ಟ್ವಿಸ್ಟ್ – ಆರೋಪಿ ಪರ ಯುವತಿಯ ಅಚ್ಚರಿ ಹೇಳಿಕೆ ರೀವಿಲ್


















