ಅಹ್ಮದಾಬಾದ್: ಐಪಿಎಲ್ 2026 ರ ಒಂಬತ್ತನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟನ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 210 ರನ್ ಗಳಿಸಿತು. 211 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳನ್ನು ಮಾತ್ರ ಗಳಿಸಿತು.
ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ನಡೆದ ಈ ಹೈ-ಸ್ಕೋರಿಂಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್‌ಗಳ ಭರ್ಜರಿ ಮೊತ್ತ ದಾಖಲಿಸಿತು. ತಂಡದ ಪರ ಯಶಸ್ವಿ ಜೈಸ್ವಾಲ್ 36 ಎಸೆತಗಳಲ್ಲಿ 55 ರನ್‌ಗಳಿಸಿದರೆ, ಧ್ರುವ್ ಜುರೆಲ್ 42 ಎಸೆತಗಳಲ್ಲಿ 75 ರನ್‌ಗಳಿಸಿ ಇನ್ನಿಂಗ್ಸ್‌ಗೆ ಬಲ ನೀಡಿದರು. ಜೊತೆಗೆ ವೈಭವ್ ಸೂರ್ಯವಂಶಿ 18 ಎಸೆತಗಳಲ್ಲಿ ವೇಗದ 31 ರನ್‌ಗಳಿಸಿ ಕೊನೆಯಲ್ಲಿ ಮಿಂಚಿದರು.
211 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಉತ್ತಮ ಆರಂಭ ಪಡೆದಿತ್ತು. ಸಾಯಿ ಸುದರ್ಶನ್ (73) ಅವರ ಅರ್ಧಶತಕದ ನೆರವಿನಿಂದ ತಂಡ ಹೋರಾಟ ಮುಂದುವರಿಸಿತು. ಆದರೆ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ಗಳ ಸರಣಿ ಕುಸಿತ ತಂಡದ ಮೇಲೆ ಒತ್ತಡ ತಂದಿತು.
ಒಂದು ಹಂತದಲ್ಲಿ 127/2 ಇದ್ದ ಟೈಟನ್ಸ್, ತಕ್ಷಣವೇ 133/5ಕ್ಕೆ ಕುಸಿದು ಪಂದ್ಯ ಕಳೆದುಕೊಂಡಿತು. ಶಾರುಖ್ ಖಾನ್ ರನ್‌ಔಟ್ ಈ ಪಂದ್ಯದಲ್ಲಿ ಪ್ರಮುಖ ತಿರುವಾಗಿತ್ತು. ಕೊನೆಯಲ್ಲಿ ರಶೀದ್ ಖಾನ್ (24) ಮತ್ತು ಕಗಿಸೋ ರಬಾಡ (ಅಜೇಯ 23) ಹೋರಾಟ ನೀಡಿದರೂ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ.
ಕೊನೆಯ ಓವರ್‌ನಲ್ಲಿ 11 ರನ್ ಅಗತ್ಯವಿದ್ದಾಗ ತುಷಾರ್ ದೇಶಪಾಂಡೆ ಕೇವಲ 6 ರನ್‌ಗಳನ್ನು ಮಾತ್ರ ನೀಡಿ ರಾಜಸ್ಥಾನ್ ರಾಯಲ್ಸ್‌ಗೆ ರೋಚಕ ಜಯ ತಂದುಕೊಟ್ಟರು. ಅದಕ್ಕೂ ಮುನ್ನ 19ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಕೇವಲ 4 ರನ್ ನೀಡಿದ್ದು ಪಂದ್ಯ ನಿರ್ಣಾಯಕ ಕ್ಷಣವಾಯಿತು. ಈ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬಿಗ್‌ಬ್ಯಾಶ್ ಸ್ಟಾರ್ ನಿಖಿಲ್ ಚೌಧರಿ ಸೇರ್ಪಡೆ.. ಬೆನ್ ಡಕೆಟ್ ಸ್ಥಾನಕ್ಕೆ ಭರ್ತಿ!



















