ಉತ್ತರಕನ್ನಡ : ಕೊಟ್ಟ ಹಣ ವಾಪಸ್ ಕೇಳಿದ ಕಾರಣಕ್ಕೆ ಯುವಕರ ಗ್ಯಾಂಗ್‌ವೊಂದು ಮಹಿಳೆಯರನ್ನು ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ನೆಹರು ನಗರದಲ್ಲಿ ನಡೆದಿದೆ.
ಯಲ್ಲಾಪುರದ ಆಯಿಷಾ ಮತ್ತು ಗೀತಾ ಹಲ್ಲೆಗೊಳಗಾದ ಮಹಿಳೆಯರು. ಮೊಹ್ಮದ್ ಸಲ್ಮಾನ್ ಮತ್ತು ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗ್ಯಾಂಗ್, ಮಹಿಳೆಯರ ಖಾಸಗಿ ಭಾಗದ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಲ್ಲೆಗೊಳಗಾದ ಮಹಿಳೆಯರ ಪೈಕಿ ಆಯಿಷಾ ಆರೋಪಿ ಸಲ್ಮಾನ್ಗೆ ಅಂಗಡಿ ಹಾಕಲು 3 ಲಕ್ಷದ 80 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಈ ನಡುವೆ ಪತಿ ಮೃತಪಟ್ಟ ಕಾರಣ ಕೆಲ ದಿನಗಳ ಕಾಲ ಹುಬ್ಬಳ್ಳಿಗೆ ತೆರಳಿ ಅವರು ನೆಲೆಸಿದ್ದರು. ಎರಡು ತಿಂಗಳ ಬಳಿಕ ಮರಳಿ ಆಯಿಷಾ ಯಲ್ಲಾಪುರಕ್ಕೆ ಬಂದಾಗ ಸಲ್ಮಾನ್ ಊರಲ್ಲಿ ಇರಲಿಲ್ಲ. ಯಲ್ಲಾಪುರ ತೊರೆದಿದ್ದ ಆತ ಶಿರಸಿಗೆ ಬಂದು ಅಲ್ಲಿ ವ್ಯಾಪಾರ ಮಾಡುತ್ತಿದ್ದಾನೆ ಎಂಬ ವಿಷಯ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ನೇರವಾಗಿ ಶಿರಸಿಗೆ ತೆರಳಿರುವ ಅವರು ಕೊಟ್ಟ ಹಣ ಹಿಂದಿರುಗಿಸುವಂತೆ ಸಲ್ಮಾನ್ಗೆ ಕೇಳಿದ್ದಾರೆ. ಇದೇ ವಿಚಾರವಾಗಿ ಮಾತುಕತೆ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಿಗ್ಗಾಮುಗ್ಗಾ ಥಳಿಸಿದೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆ ಹೇಳುವಂತೆ ಯಲ್ಲಾಪುರದಲ್ಲಿ 18-20 ವರ್ಷಗಳಿಂದ ನೆಲೆಸಿದ್ದ ಯುಪಿ ಮತ್ತು ಬಿಹಾರದ ಹುಡುಗರು ಸಲೂನ್ ಉದ್ಯಮದ ಪಾಲುದಾರರಾಗುವಂತೆ ಕೇಳಿದ್ದರು. ಅದನ್ನು ನಂಬಿ ನಾವು ಹಣ ನೀಡಿದ್ದೆವು. ಆ ಬಳಿಕ ನಗರದಲ್ಲಿ ಶಾಪ್ ಒಂದನ್ನು ತೆರೆದಿದ್ದ ಅವರು, ಬಳಿಕ ಅದನ್ನು ಕ್ಲೋಸ್ ಮಾಡಿದ್ದಾರೆ.
ಅನುಮಾನಗೊಂಡು ವಿಚಾರಿಸಿದಾಗ ಹಲವೆಡೆ ಅವರು ಸಾಲ ಮಾಡಿರೋದು ಗೊತ್ತಾದ ಕಾರಣ, ಸಂತ್ರಸ್ತೆ ಮಹಿಳೆ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಆ ವೇಳೆ ಮುಚ್ಚಳಿಕೆ ನೀಡಿ ಹಣ ಕೊಡೋದಾಗಿ ಒಪ್ಪಿದ್ದ ಖದೀಮರು, ಬಳಿಕ ಹಣ ನೀಡದೆ ತಲೆಮರೆಸಿಕೊಂಡಿದ್ದರು. ಈ ನಡುವೆ ಆರೋಪಿಗಳು ಶಿರಸಿಯಲ್ಲಿ ಕೆಲಸ ಮಾಡುತ್ತಿರುವ ವಿಷಯ ಗೊತ್ತಾಗಿದೆ. ಅಲ್ಲಿಹೋಗಿ ಆತನ ಸಹೋದರನ ಬಳಿ ಈ ಬಗ್ಗೆ ತಿಳಿಸಿದಾಗ ಸಂತ್ರಸ್ತೆ ಮತ್ತು ಅವರ ಜೊತೆಗಿದ್ಧ ಮತ್ತೊಬ್ಬ ಮಹಿಳೆ ಮೇಲೆ ಗ್ಯಾಂಗ್ ಹಲ್ಲೆ ನಡೆಸಿದೆ ಎನ್ನಲಾಗಿದೆ. ಈ ಘಟನಾ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಬಾಲಕಿ ದುರ್ಮರಣ!



















