ಬೆಂಗಳೂರು : RCB vs SRH ಪಂದ್ಯ ವೇಳೆ ನಡೆದ ಮೊಬೈಲ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 51 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ತನಿಖೆಯಲ್ಲಿ, ಸುಮಾರು 18 ಅಪ್ರಾಪ್ತರು ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇವರು ಜಾರ್ಖಂಡ್ ರಾಜ್ಯದಿಂದ ಬಂದಿದ್ದು, ಅಭಿಮಾನಿಗಳಿಂದ ಟಿಕೆಟ್ ಕದ್ದು ಸ್ಟೇಡಿಯಂ ಒಳಗೆ ಪ್ರವೇಶಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಟೇಡಿಯಂ ಒಳಗೆ ಪ್ರವೇಶಿಸುವ ವೇಳೆ ಹಾಗೂ ಪಂದ್ಯ ನಡೆಯುವ ಸಂದರ್ಭದಲ್ಲಿ ಅಭಿಮಾನಿಗಳ ಮೊಬೈಲ್‌ಗಳನ್ನು ಕದ್ದಿರುವುದಾಗಿ ಆರೋಪಿಸಲಾಗಿದೆ. ಆರ್‌ಸಿಬಿ ಟೀ ಶರ್ಟ್ ಧರಿಸಿ ಜನಸಂದಣದಲ್ಲಿ ಬೆರೆತು ಈ ಕೃತ್ಯ ಎಸಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಕರಣ ಸಂಬಂಧ 18 ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಆರೋಪಿಗಳ ಪೈಕಿ ಒಬ್ಬ ವಯಸ್ಕನನ್ನು ಬಂಧಿಸಲಾಗಿದೆ. ಶುಭಮ್ ಎಂಬಾತ ಈ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದು, ಅವನನ್ನೂ ಬಂಧಿಸಲಾಗಿದೆ. ಈ ಪ್ರಕರಣವನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ಪತ್ತೆಹಚ್ಚಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಕದ್ದ ಮೊಬೈಲ್‌ನಲ್ಲಿ ರ‍್ಯಾಪಿಡೋ ಬುಕ್ ಮಾಡಿ ಸುಲಿಗೆ ಮಾಡಿದ ಕಿರಾತಕರು ಅರೆಸ್ಟ್!



















