ಮುಂಬಯಿ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಆಟಗಾರ ಆಯುಷ್ ಮ್ಹಾತ್ರೆ, ತಮ್ಮ ಆರಾಧ್ಯ ದೈವ ರೋಹಿತ್ ಶರ್ಮಾ ಅವರೊಂದಿಗಿನ ಭಾವನಾತ್ಮಕ ಭೇಟಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗೆ ಸಿಎಸ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು, ಮುಂಬೈ ಇಂಡಿಯನ್ಸ್ ದಿಗ್ಗಜ ರೋಹಿತ್ ಶರ್ಮಾ ಅವರು ತೋರಿದ ಔದಾರ್ಯ ಮತ್ತು ತಮಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ರೋಹಿತ್ ಅವರನ್ನು ಭೇಟಿಯಾಗಬೇಕೆಂಬ ಹಂಬಲದಿಂದ ಕೇವಲ ಒಂದು ಸಂದೇಶ ಕಳುಹಿಸಿದ್ದ ತಮಗೆ, ಖುದ್ದು ರೋಹಿತ್ ಅವರೇ ಕರೆ ಮಾಡಿದ್ದು ಅಚ್ಚರಿ ಮೂಡಿಸಿತ್ತು ಎಂದು ಮ್ಹಾತ್ರೆ ಹೇಳಿದ್ದಾರೆ.
ವೀರಾರ್ ಮೂಲದವರಾದ ಆಯುಷ್ ಮ್ಹಾತ್ರೆ, ರೋಹಿತ್ ಅವರಿಗೆ ಸಂದೇಶ ಕಳುಹಿಸಿದಾಗ ರೋಹಿತ್ ಅವರು ಮರಳಿ ಕರೆ ಮಾಡಿ ನೀನು ಎಲ್ಲಿ ಇರುವುದು ಎಂದು ವಿಚಾರಿಸಿದ್ದರು. ತಾನು ವೀರಾರ್‌ನಲ್ಲಿ ಇರುವುದಾಗಿ ಹೇಳಿದಾಗ, ಅಷ್ಟು ದೂರದಿಂದ ನನ್ನನ್ನು ಭೇಟಿಯಾಗಲು ಬರುತ್ತೀಯಾ ಎಂದು ರೋಹಿತ್ ಆಶ್ಚರ್ಯದಿಂದ ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಆಯುಷ್, ನಿಮ್ಮನ್ನು ಭೇಟಿಯಾಗಲು ನಾನು ಎಲ್ಲಿಗೆ ಬೇಕಾದರೂ ಬರಲು ಸಿದ್ಧ ಎಂದು ತಿಳಿಸಿದ್ದರು. ವಿಡಿಯೋ ಕರೆಯ ಮೂಲಕವೂ ಮಾತನಾಡಬಹುದು ಎಂದು ರೋಹಿತ್ ಸೂಚಿಸಿದರಾದರೂ, ವೈಯಕ್ತಿಕವಾಗಿ ಭೇಟಿಯಾಗಬೇಕೆಂಬ ಆಯುಷ್ ಅವರ ಆಸೆಗೆ ಬೆಲೆ ಕೊಟ್ಟು ರೋಹಿತ್ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು.
ಡ್ರೀಮ್ ಡೇ
ರೋಹಿತ್ ಶರ್ಮಾ ಅವರ ಮನೆಯಲ್ಲಿ ಕಳೆದ ಆ ಎರಡು ಗಂಟೆಗಳ ಸಮಯವು ತಮ್ಮ ಜೀವನದ ‘ಡ್ರೀಮ್ ಡೇ’ ಎಂದು ಆಯುಷ್ ಬಣ್ಣಿಸಿದ್ದಾರೆ. ಒಬ್ಬ ದೊಡ್ಡ ಮಟ್ಟದ ಆಟಗಾರನಾಗಿದ್ದರೂ ರೋಹಿತ್ ಅವರು ತಮಗಾಗಿ ಅಷ್ಟು ಸಮಯ ಮೀಸಲಿಟ್ಟಿದ್ದು ಮತ್ತು ಕ್ರಿಕೆಟ್ ಕುರಿತು ನೀಡಿದ ಅಮೂಲ್ಯ ಸಲಹೆಗಳು ತಮ್ಮ ವೃತ್ತಿಜೀವನಕ್ಕೆ ದೊಡ್ಡ ಸ್ಫೂರ್ತಿ ನೀಡಿವೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ರೋಹಿತ್ ಅವರು ತಮಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದನ್ನು ಅವರು ಅತ್ಯಂತ ಸಂಭ್ರಮದಿಂದ ನೆನಪಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಎದುರಾಳಿ ತಂಡಗಳಲ್ಲಿದ್ದರೂ (ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್), ಮೈದಾನದ ಹೊರಗಿನ ಈ ಬಾಂಧವ್ಯ ಮತ್ತು ಹಿರಿಯ ಆಟಗಾರರ ಪ್ರೋತ್ಸಾಹವು ಯುವ ಆಟಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ 5 ವರ್ಷಗಳ ಟ್ರೋಫಿ ಕೊರತೆ : ವೈಫಲ್ಯದ ಬಗ್ಗೆ ಮೌನ ಮುರಿದ ಮಹೇಲಾ ಜಯವರ್ಧನೆ



















