ವಿಶಾಖಪಟ್ಟಣಂ : ಭಾರತದ ಸಾಗರ ಸುರಕ್ಷತೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಮೂರನೇ ಅಣುಶಕ್ತಿ ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ (SSBN) ‘ಐಎನ್‌ಎಸ್ ಅರಿಧಮನ್’ (INS Aridhaman) ಅನ್ನು ಇಂದು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದ ಸಮಾರಂಭದಲ್ಲಿ ಈ ಅತ್ಯಾಧುನಿಕ ಯುದ್ಧನೌಕೆಯನ್ನು ಲೋಕಾರ್ಪಣೆ ಮಾಡುವ ಮೂಲಕ ಭಾರತವು ಜಾಗತಿಕ ಮಟ್ಟದಲ್ಲಿ ತನ್ನ ಸಾಗರ ಸಾಮರ್ಥ್ಯವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದ ರಾಜನಾಥ್ ಸಿಂಗ್, “ಇದು ಕೇವಲ ಒಂದು ಪದವಲ್ಲ, ಇದು ಶಕ್ತಿಯ ಸಂಕೇತ – ಅರಿಧಮನ್!” ಎಂದು ಬರೆಯುವ ಮೂಲಕ ಈ ಜಲಾಂತರ್ಗಾಮಿಯ ಆಗಮನವನ್ನು ಖಚಿತಪಡಿಸಿದ್ದರು. ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾತ್ ನಂತರ ಭಾರತವು ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ಮೂರನೇ ಅಣು ಜಲಾಂತರ್ಗಾಮಿ ಇದಾಗಿದೆ. ಅಣುಶಕ್ತಿಯಿಂದ ಚಾಲಿತವಾಗಿರುವ ಕಾರಣ ಇದು ಸುದೀರ್ಘ ಕಾಲ ಸಮುದ್ರದಾಳದಲ್ಲಿ ಅಡಗಿದ್ದು ಶತ್ರುಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ.
ದ್ವಿಗುಣಗೊಂಡ ಕ್ಷಿಪಣಿ ದಾಳಿಯ ಶಕ್ತಿ
ಸುಮಾರು 7,000 ಟನ್ ತೂಕದ ಅರಿಧಮನ್, ತನ್ನ ಹಿಂದಿನ ಜಲಾಂತರ್ಗಾಮಿಗಳಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಇದು 3,500 ಕಿಲೋಮೀಟರ್ ದೂರದ ಗುರಿಯನ್ನು ತಲುಪಬಲ್ಲ ಎಂಟು ‘ಕೆ-4’ (K-4) ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಂದರೆ, ಅರಿಹಂತ್‌ಗಿಂತ ಇದು ಎರಡು ಪಟ್ಟು ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಬಲ್ಲದು. ಅಷ್ಟೇ ಅಲ್ಲದೆ, 750 ಕಿಲೋಮೀಟರ್ ವ್ಯಾಪ್ತಿಯ 24 ‘ಕೆ-15’ ಕ್ಷಿಪಣಿಗಳನ್ನು ಕೂಡ ಇದರಲ್ಲಿ ಅಳವಡಿಸಬಹುದಾಗಿದೆ. ಭಾಭಾ ಪರಮಾಣು ಸಂಶೋಧನಾ ಕೇಂದ್ರ (BARC) ಅಭಿವೃದ್ಧಿಪಡಿಸಿದ 83 ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಇದಕ್ಕೆ ಶಕ್ತಿ ತುಂಬುತ್ತಿದೆ.
‘ತಾರಾಗಿರಿ’ ಯುದ್ಧನೌಕೆಯೂ ಸಿದ್ಧ
ಅರಿಧಮನ್ ಜಲಾಂತರ್ಗಾಮಿಯ ಜೊತೆಗೆ, ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ‘ತಾರಾಗಿರಿ’ (Taragiri) ಕೂಡ ಇಂದು ನೌಕಾಪಡೆಗೆ ಸೇರ್ಪಡೆಯಾಗಿದೆ. ಇದು ಶತ್ರುಗಳ ರೇಡಾರ್ ಕಣ್ಣಿಗೆ ಮಣ್ಣೆರಚಿ ದಾಳಿ ಮಾಡುವ ‘ಸ್ಟೆಲ್ತ್’ ತಂತ್ರಜ್ಞಾನವನ್ನು ಹೊಂದಿದೆ. ಸೂಪರ್ ಸಾನಿಕ್ ಕ್ಷಿಪಣಿಗಳು ಮತ್ತು ಸುಧಾರಿತ ಜಲಾಂತರ್ಗಾಮಿ ನಿಗ್ರಹ ಶಸ್ತ್ರಾಸ್ತ್ರಗಳನ್ನು ಇದು ಒಳಗೊಂಡಿದೆ. ಭಾರತವು ತನ್ನದೇ ಆದ ಯುದ್ಧನೌಕೆಗಳನ್ನು ನಿರ್ಮಿಸುವ ಮೂಲಕ ‘ಆತ್ಮನಿರ್ಭರ ಭಾರತ’ಕ್ಕೆ ಸಾಕ್ಷಿಯಾಗುತ್ತಿದೆ. ಈ ಹೊಸ ಸೇರ್ಪಡೆಗಳಿಂದಾಗಿ ಹಿಂದೂ ಮಹಾಸಾಗರದಲ್ಲಿ ಭಾರತದ ಹಿಡಿತ ಮತ್ತಷ್ಟು ಬಿಗಿಯಾಗಲಿದ್ದು, ಯಾವುದೇ ಆಕ್ರಮಣಕಾರಿ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ನೌಕಾಪಡೆ ಸನ್ನದ್ಧವಾಗಿದೆ.
ಇದನ್ನೂ ಓದಿ : ಮುಸ್ತಫಿಜುರ್ ಆಯ್ಕೆ ವಿವಾದ – ಮೌನ ಮುರಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್!


















