ಲಕ್ನೋದಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ನ ಐದನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಡೆಲ್ಲಿ ತಂಡ ನಾಲ್ಕು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಡೆಲ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೇ ಒತ್ತಡ ಹೇರಿದ ಡೆಲ್ಲಿ ಬೌಲರ್‌ಗಳ ಎದುರು ಲಕ್ನೋ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಲಕ್ನೋ ತಂಡ 18.4 ಓವರ್‌ಗಳಲ್ಲಿ ಕೇವಲ 141 ರನ್‌ಗಳಿಗೆ ಆಲೌಟ್ ಆಯಿತು. ಅಬ್ದುಲ್ ಸಮದ್ 36 ರನ್ ಹಾಗೂ ಮಿಚೆಲ್ ಮಾರ್ಷ್ 35 ರನ್ ಗಳಿಸಿದ್ದು ಹೊರತುಪಡಿಸಿ ಉಳಿದವರಿಂದ ದೊಡ್ಡ ಕೊಡುಗೆ ಬಂದಿಲ್ಲ. ಡೆಲ್ಲಿ ಪರ ಲುಂಗಿ ಎನ್‌ಗಿಡಿ ಮತ್ತು ಟಿ ನಟರಾಜನ್ ತಲಾ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದು ಲಕ್ನೋಗೆ ದೊಡ್ಡ ಮೊತ್ತ ತಡೆಯುವಲ್ಲಿ ಯಶಸ್ವಿಯಾದರು.
141 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ, ಕೆಎಲ್ ರಾಹುಲ್ ಅವರನ್ನು ಔಟ್ ಮಾಡಿದರು. ನಂತರ ನಿತೀಶ್ ರಾಣಾ 15, ಪಾಥುಮ್ ನಿಸ್ಸಂಕ 1 ಮತ್ತು ಅಕ್ಷರ್ ಪಟೇಲ್ ಶೂನ್ಯಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರು. ಕೇವಲ 4.3 ಓವರ್‌ಗಳಲ್ಲಿ 26 ರನ್‌ಗೆ 4 ವಿಕೆಟ್ ಕಳೆದುಕೊಂಡ ಡೆಲ್ಲಿ ಮೇಲೆ ಒತ್ತಡ ಹೆಚ್ಚಾಯಿತು.
ಈ ಸಂದರ್ಭದಲ್ಲಿ ಯುವ ಆಟಗಾರ ಸಮೀರ್ ರಿಜ್ವಿ ತಂಡಕ್ಕೆ ಆಧಾರವಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಅವರು 47 ಎಸೆತಗಳಲ್ಲಿ 70 ರನ್‌ಗಳ ಅಜೇಯ ಅರ್ಧಶತಕ ಬಾರಿಸಿದರು. ಅವರಿಗೆ ಟ್ರಿಸ್ಟನ್ ಸ್ಟಬ್ಸ್ 39 ರನ್‌ಗಳ ನೆರವು ನೀಡಿದರು. ಈ ಜೋಡಿ ಐದನೇ ವಿಕೆಟ್‌ಗೆ 119 ರನ್‌ಗಳ ಮಹತ್ವದ ಜೊತೆಯಾಟ ಕಟ್ಟಿಕೊಂಡು ಪಂದ್ಯವನ್ನು ಡೆಲ್ಲಿಯ ಕಡೆ ತಿರುಗಿಸಿತು. ಅಂತಿಮವಾಗಿ ಡೆಲ್ಲಿ ತಂಡ 17.1 ಓವರ್‌ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಈ ಆವೃತ್ತಿಯಲ್ಲಿ ತವರಿನಲ್ಲೇ ಸೋತ ಮೊದಲ ತಂಡ ಎಂಬ ದಾಖಲೆಗೆ ಕಾರಣವಾಯಿತು.



















