ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸುರಕ್ಷತೆಗೆ (Safety) ದಿನೇ ದಿನೇ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಮತ್ತು ಜನಪ್ರಿಯ ಕಿಯಾ ಸೆಲ್ಟೋಸ್ (Kia Seltos) ಕಾರುಗಳು ಇತ್ತೀಚೆಗೆ ‘ಭಾರತ್ ಎನ್‌ಸಿಎಪಿ’ (Bharat NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದವು. ಎರಡೂ ಮಿಡ್-ಸೈಜ್ ಎಸ್‌ಯುವಿಗಳು 5-ಸ್ಟಾರ್ (5-Star) ರೇಟಿಂಗ್ ಪಡೆದು ಮಿಂಚಿವೆ. ಆದರೆ ಇವೆರಡರ ನಡುವಿನ ಅಂಕಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಿದಾಗ ಯಾವುದು ಹೆಚ್ಚು ಸುರಕ್ಷಿತ ಎಂಬ ಕುತೂಹಲ ಮೂಡುತ್ತದೆ.
ಒಟ್ಟಾರೆ ಅಂಕಗಳಲ್ಲಿ ಕಿಯಾ ಸೆಲ್ಟೋಸ್ ಮುಂದು:
ವಯಸ್ಕರ ರಕ್ಷಣೆಯಲ್ಲಿ (Adult Occupant Protection – AOP) ಮತ್ತು ಮಕ್ಕಳ ರಕ್ಷಣೆಯಲ್ಲಿ (Child Occupant Protection – COP) ಎರಡೂ ಕಾರುಗಳು 5-ಸ್ಟಾರ್ ಪಡೆದಿದ್ದರೂ, ಅಂಕಗಳ ಲೆಕ್ಕಾಚಾರದಲ್ಲಿ ಕಿಯಾ ಸೆಲ್ಟೋಸ್ ಸ್ವಲ್ಪ ಮುಂದಿದೆ. ವಯಸ್ಕರ ರಕ್ಷಣೆಯಲ್ಲಿ ಕಿಯಾ ಸೆಲ್ಟೋಸ್ 32ಕ್ಕೆ 31.70 ಅಂಕಗಳನ್ನು ಪಡೆದರೆ, ಟಾಟಾ ಸಿಯೆರಾ 31.14 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಯಲ್ಲಿ ಸೆಲ್ಟೋಸ್ 49ಕ್ಕೆ 45 ಅಂಕಗಳನ್ನು ಪಡೆದರೆ, ಸಿಯೆರಾ 44.73 ಅಂಕಗಳನ್ನು ಪಡೆದುಕೊಂಡಿದೆ.
ವಯಸ್ಕರ ಸುರಕ್ಷತೆಯ ಅಂಕಗಳಲ್ಲಿ ಈ ಸಣ್ಣ ವ್ಯತ್ಯಾಸ ಬರಲು ಕಾರಣ ಡಿಕ್ಕಿ ಪರೀಕ್ಷೆ
ಈ ಪರೀಕ್ಷೆಯಲ್ಲಿ ಸೆಲ್ಟೋಸ್ ಚಾಲಕನ ಎದೆಯ ಭಾಗ ಸೇರಿದಂತೆ ಪ್ರಮುಖ ಅಂಗಗಳಿಗೆ ‘ಉತ್ತಮ’ (Good) ರಕ್ಷಣೆ ನೀಡಿದೆ. ಚಾಲಕನ ಕೆಳಕಾಲಿನ ಭಾಗಕ್ಕೆ ಮಾತ್ರ ‘ಸಾಧಾರಣ’ (Adequate) ರಕ್ಷಣೆ ಸಿಕ್ಕಿದೆ.
ಸಿಯೆರ್ರಾದಲ್ಲಿ ಚಾಲಕನ ಎದೆಯ ಭಾಗದ ರಕ್ಷಣೆ ಮತ್ತು ಕಾಲಿನ ಕೆಳಭಾಗದ ರಕ್ಷಣೆಯಲ್ಲಿ ಸ್ವಲ್ಪ ರಾಜಿ (Adequate) ಕಂಡುಬಂದಿದೆ. ಹೆಚ್ಚಿನ ವೇಗದ ಅಪಘಾತಗಳಲ್ಲಿ ಎದೆಯ ಭಾಗದ ಸುರಕ್ಷತೆ ಅತಿ ಮುಖ್ಯವಾದ್ದರಿಂದ ಇಲ್ಲಿ ಟಾಟಾ ಕೆಲವು ಪಾಯಿಂಟ್‌ಗಳನ್ನು ಕಳೆದುಕೊಂಡಿದೆ. ಸೈಡ್ ಇಂಪ್ಯಾಕ್ಟ್ (ಪಕ್ಕದಿಂದ ಡಿಕ್ಕಿ) ಪರೀಕ್ಷೆಯಲ್ಲಿ ಎರಡೂ ಕಾರುಗಳು ಸಮಾನವಾಗಿ ‘ಉತ್ತಮ’ (Good) ರಕ್ಷಣೆ ಒದಗಿಸಿವೆ.
ಮಕ್ಕಳ ಸುರಕ್ಷತೆ (Child Safety) – ಬಹುತೇಕ ಸಮಾನ:
ಮಕ್ಕಳ ಸುರಕ್ಷತೆಯ ವಿಭಾಗದಲ್ಲಿ ಸಿಆರ್‌ಎಸ್ ಇನ್‌ಸ್ಟಾಲೇಶನ್ (12/12) ಮತ್ತು ವಾಹನ ಮೌಲ್ಯಮಾಪನದಲ್ಲಿ (9/13) ಎರಡೂ ಕಾರುಗಳು ಸಮಾನ ಅಂಕ ಪಡೆದಿವೆ. ಆದರೆ, ಡೈನಾಮಿಕ್ ಕ್ರ್ಯಾಶ್ ಟೆಸ್ಟ್‌ನಲ್ಲಿ ಕಿಯಾ ಸೆಲ್ಟೋಸ್ 24/24 ಪೂರ್ಣ ಅಂಕ ಪಡೆದಿದೆ.
ಟಾಟಾ ಸಿಯೆರಾ 18 ತಿಂಗಳ ಮಗುವಿನ ಡಮ್ಮಿ ಬಳಸಿದ ಮುಂಭಾಗದ ಡಿಕ್ಕಿ ಪರೀಕ್ಷೆಯಲ್ಲಿ ಸಣ್ಣ ಅಂಕ ಕಳೆದುಕೊಂಡು 23.73 ಗಳಿಸಿದೆ. 3 ವರ್ಷದ ಮಗುವಿನ ಡಮ್ಮಿ ಪರೀಕ್ಷೆಯಲ್ಲಿ ಎರಡೂ ಕಾರುಗಳ ಸಾಧನೆ ಅದ್ಭುತವಾಗಿದೆ.
ಸುರಕ್ಷತಾ ಫೀಚರ್‌ಗಳು (Safety Features):
ಫೀಚರ್‌ಗಳ ವಿಚಾರದಲ್ಲಿ ಎರಡೂ ಕಾರುಗಳು ಸಮಬಲ ಸಾಧಿಸಿವೆ. ಎರಡರಲ್ಲೂ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, TPMS, ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಡಿಸೆಂಟ್ ಕಂಟ್ರೋಲ್ ಮತ್ತು ಲೆವೆಲ್-2 ADAS (Advanced Driver Assistance Systems) ತಂತ್ರಜ್ಞಾನವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಿಯಾ ಸೆಲ್ಟೋಸ್ ಮತ್ತು ಟಾಟಾ ಸಿಯೆರಾ ಎರಡೂ ಕಾರುಗಳು ತಮ್ಮ ಸೆಗ್ಮೆಂಟ್‌ನ ಅತ್ಯಂತ ಸುರಕ್ಷಿತ ಕಾರುಗಳಾಗಿವೆ. ಎರಡರಲ್ಲೂ ಯಾವುದೇ ಗಂಭೀರ ನ್ಯೂನತೆಗಳಿಲ್ಲ. ಆದರೆ, ಕ್ರ್ಯಾಶ್ ಟೆಸ್ಟ್‌ನ ಕಟ್ಟುನಿಟ್ಟಾದ ಅಂಕಗಳ ಆಧಾರದ ಮೇಲೆ ನೋಡುವುದಾದರೆ, ಕಿಯಾ ಸೆಲ್ಟೋಸ್ ಕೇವಲ ಕೂದಲೆಳೆಯ ಅಂತರದಲ್ಲಿ ಟಾಟಾ ಸಿಯೆರಾಕ್ಕಿಂತ ಕೊಂಚ ಮೇಲುಗೈ ಸಾಧಿಸಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ECIL ಸಂಸ್ಥೆಯಲ್ಲಿ 32 ಹುದ್ದೆಗಳು ಖಾಲಿ.. ಕರ್ನಾಟಕದ 2 ಜಿಲ್ಲೆಗಳಲ್ಲಿ ನೇಮಕ!


















