ಬೆಂಗಳೂರು : ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ (KSNC) ರಿಜಿಸ್ಟ್ರಾರ್, ತನ್ನದೇ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಮಲ್ಲುವನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಮಾತನಾಡಿ, ಮಾರ್ಚ್ 26 ರಂದು ಓರ್ವ ಮಹಿಳೆ ಉಪ್ಪಾರಪೇಟೆ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ ಸಂಬಂಧಪಟ್ಟಂತೆ ದೂರು ಬಂದಿದ್ದು, ಈ ಹಿನ್ನಲೆ ಕರ್ನಾಟಕ ಸ್ಟೇಟ್ ನರ್ಸಿಂಗ್ ಕಾನ್ಸಿಲ್ ರಿಜಿಸ್ಟರ್‌ಗೆ ನೋಟೀಸ್ ಕಳುಹಿಸಲಾಗಿತ್ತು. ಆ ಬಳಿಕ ಆರೋಪಿ ಠಾಣೆಗೆ ಹಾಜರಾಗದೇ ನಾಪತ್ತೆಯಾಗಿದ್ದನು. ತನಿಖೆ ನಡೆಸಿ ಇದೀಗ ಆರೋಪಿ ಮಲ್ಲುವನ್ನು ಬಂಧಿಸಿ, ವಿಚಾರಣೆ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ :
ರಾಜ್ಯದ ಸಚಿವರೊಬ್ಬರ ಕಾರು ಚಾಲಕನ ಮಗಳು ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ (KSNC) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಮೇಲೆ ಅಲ್ಲಿನ ರಿಜಿಸ್ಟ್ರಾರ್ ಮಲ್ಲು ಎಂಬಾತ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದನು. ಈ ಬಗ್ಗೆ ಸಂತ್ರಸ್ತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ಸಲ್ಲಿಸಿದ್ದರು.
ಆಕೆಯ ಹೇಳಿಕೆಯಂತೆ, ಆರೋಪಿ ಮಲ್ಲು ಬಲವಂತವಾಗಿ ಅಂಗಾಂಗ ಮುಟ್ಟಿ ಎಳೆದಾಡಿದ್ದಾನೆ. ಕೆಲಸದ ನೆಪದಲ್ಲಿಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ವಿರೋಧ ವ್ಯಕ್ತಪಡಿಸಿದರೂ ಬಿಡದೇ ಅಧಿಕಾರದ ಮದದಲ್ಲಿ ಎಳೆದಾಡಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳದಲ್ಲೂ ಸಂತ್ರಸ್ತೆಯ ಮೈ ಮುಟ್ಟಿ ಬಲವಂತವಾಗಿ ಎಳೆದಾಡಿದ್ದಲ್ಲದೆ ಕಾರೊಳಗೆ ಹತ್ತಿಸಲು ಯತ್ನಿಸಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ಬಿಡದ ಆರೋಪಿ ಮಲ್ಲು, ಈ ವೇಳೆ ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು, ಮುತ್ತು ಕೊಡಲು ಯತ್ನಿಸಿ ವಿಕೃತಿ ಮೆರೆದಿದ್ದಾನೆಂದು ದೂರಿನಲ್ಲಿ ಆಕೆ ತಿಳಿಸಿದ್ದಾರೆ.
ಇನ್ನು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರಿಜಿಸ್ಟ್ರಾರ್ ಮಲ್ಲು ತಲೆಮರೆಸಿಕೊಂಡಿದ್ದನು. ಇದೀಗ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ : ಆರೋಗ್ಯ ಇಲಾಖೆ ಅಧಿಕಾರಿಯಿಂದಲೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ – FIR ಬೆನ್ನಲ್ಲೇ KSNC ರಿಜಿಸ್ಟ್ರಾರ್ ನಾಪತ್ತೆ!



















