ಮಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ 4ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಸಾಯಿ ಸುದರ್ಶನ್ ಕೇವಲ 13 ರನ್ ಗಳಿಸಿ ಔಟ್ ಆಗಿದರು. ನಂತರ ಶುಭ್‌ಮನ್ ಗಿಲ್ ಮತ್ತು ಜೋಸ್ ಬಟ್ಲರ್ ಉತ್ತಮ ಜೊತೆಯಾಟದೊಂದಿಗೆ ತಂಡವನ್ನು ಹತೋಟಿಗೆ ತಂದರು. ಗಿಲ್ 39 ರನ್ ಗಳಿಸಿ ಔಟ್ ಆಗಿದ ನಂತರ ಮಧ್ಯಕ್ರಮ ಕುಸಿತ ಕಂಡಿತು. ಯುಜ್ವೇಂದ್ರ ಚಹಲ್ ಪ್ರಮುಖ ವಿಕೆಟ್ ಪಡೆದು ಪಂದ್ಯದ ದಿಕ್ಕು ಬದಲಿಸಿದರು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್ ಹಾಗೂ ಇತರರಿಂದ ನಿರೀಕ್ಷಿತ ಆಟ ಬರದೆ ಗುಜರಾತ್ 20 ಓವರ್‌ಗಳಲ್ಲಿ 162 ರನ್ ಗಳಿಸಿತು.
163 ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡವೂ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೆ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಕೂಪರ್ ಕೊನೊಲಿ ತಂಡಕ್ಕೆ ಭದ್ರ ನೆಲೆ ಕಲ್ಪಿಸಿದರು. ಮಧ್ಯದಲ್ಲಿ ಪ್ರಸಿದ್ಧ್ ಕೃಷ್ಣ ದಾಳಿಯಿಂದ ಪಂಜಾಬ್ ಕೆಲವು ವಿಕೆಟ್ ಕಳೆದುಕೊಂಡರೂ, ಕೊನೊಲಿ ಶಾಂತವಾಗಿ ಆಟ ಕಟ್ಟಿದರು.
ಅಂತಿಮವಾಗಿ ಕೂಪರ್ ಕೊನೊಲಿ ಅದ್ಭುತ ಇನ್ನಿಂಗ್ಸ್ ಆಡಿದರು. 44 ಎಸೆತಗಳಲ್ಲಿ 72 ರನ್ ಗಳಿಸಿ, ಐದು ಸಿಕ್ಸ್ ಮತ್ತು ಐದು ಬೌಂಡರಿ ಹೊಡೆದು ಅಜೇಯರಾಗಿ ಉಳಿದು, ತಂಡವನ್ನು 19.1 ಓವರ್‌ಗಳಲ್ಲಿ ಗುರಿ ತಲುಪಿಸಿ ಗೆಲುವಿನತ್ತ ಮುನ್ನಡೆಸಿದರು.
ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು 3 ವಿಕೆಟ್‌ಗಳ ಅಂತರದಲ್ಲಿ ರೋಚಕ ಜಯ ಸಾಧಿಸಿದ್ದು, ಪಂದ್ಯದಲ್ಲಿ ಕೂಪರ್ ಕೊನೊಲಿ ಹೀರೋ ಆಗಿ ಹೊರಹೊಮ್ಮಿದರು.
ಇದನ್ನೂ ಓದಿ : ರಾಜಸ್ಥಾನ್ ಪರ ಕಣಕ್ಕಿಳಿದ ಬ್ರಿಜೇಶ್ ಶರ್ಮಾ ಯಾರು? ಎಲ್ಲಿಯವರು?



















