ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಶಾಲಾ ಪ್ರವೇಶದ ವಯೋಮಿತಿ ನಿಯಮದ ಗೊಂದಲದಿಂದ ಕಂಗಾಲಾಗಿರುವ ಪೋಷಕರಿಗೆ, ಖಾಸಗಿ ಶಾಲೆಗಳ ಶುಲ್ಕ ಏರಿಕೆ ಮಾಡಿದ್ದು, ಹೆಚ್ಚುವರಿ ತಲೆನೋವನ್ನಾಗಿ ಪರಿಣಮಿಸಿದೆ.
2026–27ನೇ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಕೆಲವು ಖಾಸಗಿ ಶಾಲೆಗಳು ಈಗಾಗಲೇ ಆರಂಭಿಸಿದ್ದು, ಇದೇ ವೇಳೆ 5ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಇದರಿಂದ ಆರ್ಥಿಕ ಒತ್ತಡದಲ್ಲಿರುವ ಕುಟುಂಬಗಳು ಆತಂಕ ವ್ಯಕ್ತಪಡಿಸುತ್ತಿವೆ.
ಇನ್ನೊಂದೆಡೆ, ಈ ವರ್ಷ ಸರ್ಕಾರ ಕೇವಲ 60 ದಿನಗಳ ವಯೋಮಿತಿ ಸಡಿಲಿಕೆ ನೀಡಿರುವುದು ಪೋಷಕರಿಗೆ ಮತ್ತಷ್ಟು ಗೊಂದಲ ಉಂಟುಮಾಡಿದೆ. ಹಿಂದಿನಂತೆ 5.5 ವರ್ಷದ ವಯೋಮಿತಿಯನ್ನು ಮುಂದುವರಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಮಕ್ಕಳನ್ನು ಮತ್ತೆ ಯುಕೆಜಿ ತರಗತಿಗೆ ಸೇರಿಸಬೇಕಾಗಿ ಬಂದು, ಲಕ್ಷಾಂತರ ರೂಪಾಯಿ ಶುಲ್ಕವನ್ನು ಮರುಪಾವತಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲ ಶಾಲೆಗಳು 5ರಿಂದ 10 ಶೇಕಡಾ, ಇನ್ನೂ ಕೆಲವು 10ರಿಂದ 15 ಶೇಕಡಾ ವರೆಗೆ ಶುಲ್ಕ ಹೆಚ್ಚಿಸಿರುವುದಾಗಿ ಪೋಷಕರು ದೂರಿದ್ದಾರೆ. ಪ್ರತಿವರ್ಷವೂ ವಿವಿಧ ಕಾರಣಗಳನ್ನು ನೀಡುತ್ತಾ ಶುಲ್ಕ ಹೆಚ್ಚಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕಾಗಿ ತಮಿಳುನಾಡು ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಪೋಷಕರ ಸಮನ್ವಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ. ಒಟ್ಟಾರೆ, ವಯೋಮಿತಿ ಗೊಂದಲ ಮತ್ತು ಶುಲ್ಕ ಏರಿಕೆಯ ಎರಡೂ ಸಮಸ್ಯೆಗಳು ಪೋಷಕರಿಗೆ ಭಾರೀ ಹೊರೆ ಆಗಿದ್ದು, ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗಿದೆ.



















