ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ‘ವಿಐಪಿ’ ಸಂಸ್ಕೃತಿ ಹಾಗೂ ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಸಚಿವ, ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜನಸಾಮಾನ್ಯರ ಸಮಸ್ಯೆಗಳಿಗಿಂತ ಶಾಸಕರ ಸೌಲಭ್ಯಕ್ಕೇ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಚಾಟಿ ಬೀಸಿದ್ದಾರೆ.
ಈ ಕುರಿತು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಎಸ್. ಸುರೇಶ್ ಕುಮಾರ್ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
“ರಾಜ್ಯದಲ್ಲಿ ತಾವು ‘ಸಮಾಜವಾದಿ’ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದೆ. ಆದರೆ, ಇಂತಹ ಆಡಳಿತದಲ್ಲೂ ವಿಐಪಿ ಸಂಸ್ಕೃತಿ ಮುಂದುವರಿಯುತ್ತಿರುವುದು ಅಚ್ಚರಿ ಮತ್ತು ದುರಂತ” ಎಂದು ಸುರೇಶ್ ಕುಮಾರ್ ಕಿಡಿಕಾರಿದ್ದಾರೆ. ಕಳೆದ ವರ್ಷ ಆರ್.ಸಿ.ಬಿ ವಿಜಯೋತ್ಸವದ ವೇಳೆ ಮುಖ್ಯಮಂತ್ರಿಗಳು ತಮ್ಮ ಮೊಮ್ಮಗನನ್ನು ವೇದಿಕೆಗೆ ಕರೆತಂದಿದ್ದನ್ನು ನೆನಪಿಸಿದ ಅವರು, ಅಧಿಕಾರವನ್ನು ವೈಯಕ್ತಿಕ ಪ್ರತಿಷ್ಠೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಮಾರ್ಚ್ 26ರಂದು ವಿಧಾನಸಭೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುರೇಶ್ ಕುಮಾರ್, “ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಪಡುತ್ತಿರುವ ಕಷ್ಟಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ, ಅದರ ಬದಲಾಗಿ ಐಪಿಎಲ್ ಟಿಕೆಟ್ ಸಿಗುತ್ತಿಲ್ಲ, ಶಾಸಕರಿಗೆ ಮರ್ಯಾದೆ ಇಲ್ಲ ಎಂಬ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆದದ್ದು ದುರದೃಷ್ಟಕರ. ಸ್ವತಃ ಸಭಾಧ್ಯಕ್ಷರೇ ಇದಕ್ಕೆ ಧ್ವನಿಗೂಡಿಸಿದ್ದು ನನಗೆ ಆಶ್ಚರ್ಯ ತಂದಿತು” ಎಂದು ಬರೆದಿದ್ದಾರೆ.
ಕಳೆದ ವರ್ಷ ಐಪಿಎಲ್ ಸಂಭ್ರಮಾಚರಣೆ ವೇಳೆ ನಡೆದ ಅವಘಡದಲ್ಲಿ 11 ಮಂದಿ ಮೃತಪಟ್ಟಿದ್ದನ್ನು ನೆನಪಿಸಿದ ಅವರು, “ಅಂದು ಆಕ್ರೋಶ ವ್ಯಕ್ತಪಡಿಸಿದ್ದವರೇ ಇಂದು ಟಿಕೆಟ್‌ಗಾಗಿ ಹಪಾಹಪಿಸುತ್ತಿರುವುದು ಜನಸಾಮಾನ್ಯರಲ್ಲಿ ರಾಜಕಾರಣಿಗಳ ಬಗ್ಗೆ ತಿರಸ್ಕಾರ ಮೂಡಿಸುವಂತೆ ಮಾಡಿದೆ. ನಾವು ವೇದಿಕೆ ಮೇಲೆ ‘ಜನಸೇವಕರು’ ಎಂದು ಹೇಳಿಕೊಳ್ಳುತ್ತೇವೆ, ಆದರೆ ವಾಸ್ತವದಲ್ಲಿ ವಿಐಪಿ ಸಂಸ್ಕೃತಿಗೆ ಬೆಲೆ ಕೊಡುತ್ತಿದ್ದೇವೆ” ಎಂದು ಆಕ್ಷೇಪಿಸಿದ್ದಾರೆ.
ಶಾಸಕರಿಗೆ ತಲಾ ಎರಡು ಹಾಗೂ ಮುಂದೆ ಐದು ಐಪಿಎಲ್ ಟಿಕೆಟ್ ನೀಡುವ ಸರ್ಕಾರದ ನಿರ್ಧಾರವನ್ನು ಸುರೇಶ್ ಕುಮಾರ್ ಅವರು ಸವಿನಯವಾಗಿ ನಿರಾಕರಿಸಿದ್ದಾರೆ. “ನಮ್ಮ ಅದೆಷ್ಟೋ ಪ್ರಶ್ನೆಗಳಿಗೆ ವರ್ಷಾನುಗಟ್ಟಲೆ ಫಲಿತಾಂಶ ಸಿಕ್ಕಿರುವುದಿಲ್ಲ. ಆದರೆ, ಶಾಸಕರ ವಿಷಯ ಬಂದ ತಕ್ಷಣ 24 ಗಂಟೆಯೊಳಗೆ ಸರ್ಕಾರ ಟಿಕೆಟ್ ಘೋಷಣೆ ಮಾಡಿದೆ. ದಯವಿಟ್ಟು ನನಗೆ ಆ ಟಿಕೆಟ್ ಖಂಡಿತ ಬೇಡ. ಈ ವಿಐಪಿ ಸಂಸ್ಕೃತಿ ನಮ್ಮನ್ನು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿ ಮಾಡುತ್ತದೆ” ಎಂದಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು, ಮೂಡಿಗೆರೆಯಲ್ಲಿ ಬಿರುಗಾಳಿ ಸಹಿತ ವರುಣನ ಅಬ್ಬರ.. ಜನಜೀವನ ಅಸ್ತವ್ಯಸ್ತ!



















