ಮೈಸೂರು : ಮೈಸೂರು ಜಿಲ್ಲೆಯಲ್ಲಿ ವಿಷಾದಕರ ಘಟನೆ ಸಂಭವಿಸಿದ್ದು, ಜಮೀನಿನಲ್ಲಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ ಡಿ ಕೋಟೆ ತಾಲೂಕಿನ ಅಗಸನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಗಿರೀಶ್ ಎಂಬ ರೈತನ ಜಮೀನಿನಲ್ಲಿ ಕಾಡು ಹಂದಿ ಹಾವಳಿ ತಡೆಯಲು ಹುರುಳು ಅಳವಡಿಸಲಾಗಿತ್ತು. ಇದೇ ಹುರುಳಿಗೆ ಸಿಲುಕಿದ ಹುಲಿ 2-3 ದಿನಗಳ ಹಿಂದೆಯೇ ಮೃತಪಟ್ಟಿರುವುದು ತಿಳಿದುಬಂದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿದೆ. ಈ ಸಂಬಂಧ ಜಮೀನು ಮಾಲೀಕನ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಅರಣ್ಯ ಇಲಾಖೆ ಮುಂದುವರಿಸಿದೆ.



















