ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವ ಸಮೀಪಿಸುತ್ತಿದ್ದಂತೆ, ಕೆಲ ರೌಡಿಶೀಟರ್‌ಗಳ ಅಬ್ಬರ ಹೆಚ್ಚುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ಹಿನ್ನೆಲೆ ನಗರದ ಕೆಲ ಭಾಗಗಳಲ್ಲಿ ರೌಡಿಗಳ ದರ್ಬಾರ್ ನಡೆಯುತ್ತಿದ್ದು, ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ನಂದೀಶ್ ಅಲಿಯಾಸ್ ಕ್ಯಾಟ್ ಎಂಬಾತ ತನ್ನ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ವೇಳೆ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಲಭ್ಯವಾಗಿದೆ. ಕರಗ ವೇಳೆ ಸಾಮಾನ್ಯವಾಗಿ ಕೇಳಿಬರುವ ಅಣ್ಣಮ್ಮದೇವಿ ಸಂಗೀತಕ್ಕೆ ಮಚ್ಚು ಹಿಡಿದು ನೃತ್ಯ ಮಾಡಿರುವ ದೃಶ್ಯಗಳು ಕಂಡುಬಂದಿವೆ.
ಈ ವೇಳೆ ನಂದೀಶನೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿ ಕೂಡ ಚಾಕು ಹಿಡಿದು ನೃತ್ಯದಲ್ಲಿ ಭಾಗಿಯಾಗಿದ್ದು, ಈ ಘಟನೆಗೆ ಮತ್ತಷ್ಟು ಗಂಭೀರತೆ ತಂದಿದೆ. “ಹವಾ ಮೆಂಟೇನ್” ಮಾಡಲು ಈ ರೀತಿ ಪ್ರದರ್ಶನ ನಡೆಸಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ.
ಕರಗ ಉತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ಇಂತಹ ಘಟನೆಗಳು ಕಾನೂನು ಸುವ್ಯವಸ್ಥೆಗೆ ಸವಾಲಾಗುವ ಸಾಧ್ಯತೆ ಇದೆ. ಪೊಲೀಸರು ಈ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಪ್ರದರ್ಶನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ. ನಗರದ ಜನರು ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ : ಸಾಕು ನಾಯಿ ಬೊಗಳಿತೆಂದು ಕುಡುಗೋಲಲ್ಲಿ ಬರ್ಬರವಾಗಿ ಕೊಚ್ಚಿ ಕೊಂದ ಕ್ರೂರಿ!



















