ಕೋಲ್ಕೊತಾ : ಹೀರೋ ಮೋಟೋಕಾರ್ಪ್‌ನ ಎಲೆಕ್ಟ್ರಿಕ್ ವಾಹನ ವಿಭಾಗವಾದ ‘ವಿದಾ’ , ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗಿನ ತನ್ನ ಪಾಲುದಾರಿಕೆ ಹಿನ್ನೆಲೆ ಹೊಸ ‘Vida VX2 Plus KKR ಲಿಮಿಟೆಡ್ ಎಡಿಷನ್’ ಸ್ಕೂಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ‘ನೈಟ್ಸ್ ಅನ್‌ಪ್ಲಗ್ಡ್ 3.0’ ಕಾರ್ಯಕ್ರಮದಲ್ಲಿ ಈ ವಿಶೇಷ ಆವೃತ್ತಿಯನ್ನು ಅನಾವರಣಗೊಳಿಸಲಾಗಿದ್ದು, ಇದು ಕೆಕೆಆರ್ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ಸ್ಕೂಟರ್.
ಈ ಲಿಮಿಟೆಡ್ ಎಡಿಷನ್ ಸ್ಕೂಟರ್ ಸಂಪೂರ್ಣವಾಗಿ ಕೆಕೆಆರ್ ತಂಡದ ಗುರುತನ್ನು ಪ್ರತಿಬಿಂಬಿಸುತ್ತದೆ. ತಂಡದ ಸಾಂಪ್ರದಾಯಿಕ ನೇರಳೆ ಮತ್ತು ಚಿನ್ನದ ಬಣ್ಣಗಳ ಸಂಯೋಜನೆಯನ್ನು ಈ ಸ್ಕೂಟರ್‌ಗೆ ನೀಡಲಾಗಿದೆ. ಕಪ್ಪು ಬಣ್ಣದ ಬೇಸ್ ಮೇಲೆ ಗೋಲ್ಡನ್ ಗ್ರೇಡಿಯಂಟ್ ಡೀಟೇಲಿಂಗ್ ನೀಡಲಾಗಿದ್ದು, ಇದು ಸ್ಕೂಟರ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ. ವಿಶೇಷವಾಗಿ ಕೆಕೆಆರ್ ತಂಡವು ಇದುವರೆಗೆ ಗೆದ್ದಿರುವ ಮೂರು ಐಪಿಎಲ್ ಪ್ರಶಸ್ತಿಗಳನ್ನು ಸಂಕೇತಿಸಲು ಸ್ಕೂಟರ್ ಮೇಲೆ ಮೂರು ಅಕ್ಸೆಂಟ್ ಮಾರ್ಕ್‌ಗಳನ್ನು ಬಳಸಲಾಗಿದೆ. ಇದರೊಂದಿಗೆ ಕೆಕೆಆರ್ ಥೀಮ್ ಹೊಂದಿರುವ ವಿಶೇಷ ಹೆಲ್ಮೆಟ್ ಕೂಡ ಲಭ್ಯವಿರಲಿದೆ.
ತಾಂತ್ರಿಕ ವೈಶಿಷ್ಟ್ಯಗಳು
ತಾಂತ್ರಿಕವಾಗಿ ಈ ಸ್ಕೂಟರ್ ಪ್ರಮಾಣಿತ Vida VX2 Plus ಮಾದರಿಯನ್ನೇ ಹೋಲುತ್ತದೆ. ಇದರಲ್ಲಿ 3.4kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 142 ಕಿಲೋಮೀಟರ್ ದೂರ ಚಲಿಸಬಲ್ಲದು (ಕ್ಲೈಮ್ಡ್ ರೇಂಜ್). ಕ್ರೀಡಾ ಮನೋಭಾವವನ್ನು ಹೆಚ್ಚಿಸಲು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು ಮತ್ತು ಸ್ಪೋರ್ಟಿ ಬಾಡಿವರ್ಕ್ ಅನ್ನು ಉಳಿಸಿಕೊಳ್ಳಲಾಗಿದೆ. ಆಯ್ದ ವಿದಾ ಡೀಲರ್‌ಶಿಪ್‌ಗಳಲ್ಲಿ ಮಾತ್ರ ಈ ಸ್ಕೂಟರ್ ಮಾರಾಟಕ್ಕೆ ಲಭ್ಯವಿರಲಿದೆ.
ಆಟಗಾರರಿಗೂ ಸಿಗಲಿದೆ ವಿಶೇಷ ಕೊಡುಗೆ
ಸ್ಕೂಟರ್ ಬಿಡುಗಡೆಯ ಜೊತೆಗೆ ವಿದಾ ಸಂಸ್ಥೆಯು ‘ವಿದಾ ಎಲೆಕ್ಟ್ರಿಫೈಯಿಂಗ್ ಪ್ಲೇಯರ್ ಆಫ್ ದಿ ಮ್ಯಾಚ್’ ಎಂಬ ಹೊಸ ಅಭಿಯಾನವನ್ನು ಘೋಷಿಸಿದೆ. ಐಪಿಎಲ್ 2026ರಲ್ಲಿ ಕೆಕೆಆರ್ ತಂಡವು ಜಯಗಳಿಸಿದ ಪ್ರತಿಯೊಂದು ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಈ ವಿಶೇಷ ಆವೃತ್ತಿಯ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ವಿಶೇಷವೆಂದರೆ, ಈ ಸ್ಕೂಟರ್ ಮೇಲೆ ಆಯಾ ಆಟಗಾರನ ಹೆಸರು ಮತ್ತು ಜರ್ಸಿ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ. ಈ ಮೂಲಕ ಮೈದಾನದ ಹೊರಗೂ ಕೆಕೆಆರ್ ಕ್ರೇಜ್ ಹೆಚ್ಚಿಸಲು ವಿದಾ ಮುಂದಾಗಿದೆ.
ಇದನ್ನೂ ಓದಿ : ಇನ್ಮುಂದೆ 625 ಅಲ್ಲ, 525 ಅಂಕಗಳಿಗೆ ಮಾತ್ರ ರಿಸಲ್ಟ್.. SSLC ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ!



















