ಬೆಂಗಳೂರು : ಐಪಿಎಲ್ 19ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ (LSG) ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಮ್ಮ ತಂಡದ ಗುರಿಯ ಬಗ್ಗೆ ಅತ್ಯಂತ ಸ್ಪಷ್ಟ ಮತ್ತು ಕಠಿಣ ಸಂದೇಶ ರವಾನಿಸಿದ್ದಾರೆ. ಕಳೆದ ಎರಡು ಸೀಸನ್‌ಗಳಲ್ಲಿ ತಂಡವು 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರಿಂದ ಅಸಮಾಧಾನಗೊಂಡಿರುವ ಅವರು, ಈ ಬಾರಿ ಕೇವಲ ಪ್ಲೇಆಫ್ ಹಂತ ತಲುಪುವುದು ನಮ್ಮ ಗುರಿಯಲ್ಲ, ಬದಲಿಗೆ ಚಾಂಪಿಯನ್ ಪಟ್ಟಕ್ಕೇರುವುದು ನಮ್ಮ ಏಕೈಕ ಆದ್ಯತೆ ಎಂದು ಘೋಷಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಗೋಯೆಂಕಾ, ಕ್ರೀಡಾ ಜಗತ್ತಿನಲ್ಲಿ ಗೆಲುವೊಂದೇ ಅಂತಿಮ ಮಾನದಂಡ ಎಂದು ಪ್ರತಿಪಾದಿಸಿದ್ದಾರೆ. “ಯಾವುದೇ ಕ್ರೀಡಾ ತಂಡಕ್ಕೆ ನಿಜವಾದ ಗೌರವ ಮತ್ತು ಅಭಿಮಾನಿಗಳು ಸಿಗುವುದು ಅವರು ಟ್ರೋಫಿ ಎತ್ತಿ ಹಿಡಿದಾಗ ಮಾತ್ರ. ನಾವು ಮೊದಲ ಎರಡು ವರ್ಷಗಳಲ್ಲಿ ಪ್ಲೇಆಫ್ ತಲುಪಿದ್ದೇವೆ ನಿಜ, ಆದರೆ ಅದು ಸಾಲದು. ಲಕ್ನೋ ತಂಡಕ್ಕೆ ತನ್ನದೇ ಆದ ಭದ್ರವಾದ ಅಸ್ತಿತ್ವ ನಿರ್ಮಾಣವಾಗಬೇಕೆಂದರೆ ನಾವು ಚಾಂಪಿಯನ್ ಆಗಲೇಬೇಕು,” ಎಂದು ಅವರು ಹೇಳಿದ್ದಾರೆ. ತಂಡದ ಮೇಲಿನ ಟೀಕೆಗಳಿಗೆ ಉತ್ತರಿಸಿದ ಅವರು, ಸೋತಾಗ ಟೀಕೆಗಳು ಬರುವುದು ಸಹಜ, ಅದಕ್ಕೆ ಮೈದಾನದಲ್ಲೇ ಉತ್ತರ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಹಳೆಯ ತಪ್ಪುಗಳಿಂದ ಕಲಿತ ಪಾಠ
ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡವು ಅನುಭವಿಸಿದ ಹಿನ್ನಡೆಗೆ ಪ್ರಮುಖ ಕಾರಣಗಳನ್ನು ಗೋಯೆಂಕಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಾದ ಸರಣಿ ಗಾಯದ ಸಮಸ್ಯೆಗಳು ಮತ್ತು ಹರಾಜಿನ ಸಮಯದಲ್ಲಿ ಮಾಡಿದ ಕೆಲವು ತಪ್ಪು ನಿರ್ಧಾರಗಳು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದ್ದವು. “ಕಳೆದ ವರ್ಷ ನಮ್ಮ ಬಳಿ ಚಾಂಪಿಯನ್ ಆಗುವಂತಹ ಸಮತೋಲಿತ ತಂಡವಿರಲಿಲ್ಲ ಎಂಬುದು ಸತ್ಯ. ಆದರೆ ಈ ಬಾರಿ ನಾವು ಹರಾಜಿನಲ್ಲಿ ಅತ್ಯಂತ ಜಾಣ್ಮೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ತಂಡದ ಸಮತೋಲನವು ಈಗ ಅತ್ಯುತ್ತಮವಾಗಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ನಾಯಕತ್ವ ಮತ್ತು ಬಲಿಷ್ಠ ತಂಡ
ಈ ಬಾರಿಯ ಹರಾಜಿನಲ್ಲಿ 27 ಕೋಟಿ ರೂಪಾಯಿ ನೀಡಿ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ಪಂತ್ ಅವರ ನಾಯಕತ್ವದ ಮೇಲೆ ತಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಗೋಯೆಂಕಾ ತಿಳಿಸಿದ್ದಾರೆ. ಏಡನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್ ಮತ್ತು ರಿಷಭ್ ಪಂತ್ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಮತ್ತು ಮೊಹಮ್ಮದ್ ಶಮಿ ನೇತೃತ್ವದ ಘಾತಕ ಬೌಲಿಂಗ್ ವಿಭಾಗವು ಈ ಬಾರಿ ಎದುರಾಳಿಗಳಿಗೆ ನಡುಕ ಹುಟ್ಟಿಸುವುದು ಖಚಿತ. ವೈಯಕ್ತಿಕ ಪ್ರದರ್ಶನಕ್ಕಿಂತ ಸಾಂಘಿಕ ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ 1ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ : ಚಲಿಸುತ್ತಿರುವಾಗ್ಲೇ ಕಳಚಿದ KSRTC ಬಸ್ ಟೈರ್ – ಪ್ರಯಾಣಿಕರ ಆಕ್ರೋಶ!



















