ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಂಟಾಗಿ ಹಾರ್ಮುಜ್ ಜಲಸಂಧಿ ಸ್ಥಗಿತಗೊಂಡ ಕಾರಣ ಭಾರತದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಕೇಂದ್ರ ಸರ್ಕಾರವು ಒಂದು ಅಡುಗೆ ಅನಿಲ ಸಿಲಿಂಡರ್ ಪಡೆದ ಮೇಲೆ ಇನ್ನೊಂದು ಸಿಲಿಂಡರ್ ಬುಕ್ ಮಾಡಲು 25 ದಿನಗಳ ಅಂತರ ನಿಗದಿಪಡಿಸಿದೆ. ಇದರ ಬೆನ್ನಲ್ಲೇ, ಈ ಅಂತರದ ದಿನಗಳನ್ನು 35 ದಿನಗಳಿಗೆ ಏರಿಕೆಯಾಗಿದೆ ಎಂಬ ಕುರಿತು ಮಾಹಿತಿ ಹರಿದಾಡುತ್ತಿದೆ. ಆದರೆ, ಜನರು ನಿಖರ ಮಾಹಿತಿ ತಿಳಿಯುವ ಅವಶ್ಯಕತೆ ಇದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮಾಧ್ಯಮಗಳಲ್ಲಿ ಎಲ್ ಪಿಜಿ (LPG) ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳು ಬದಲಾಗಿವೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಎರಡು ಸಿಲಿಂಡರ್ ಹೊಂದಿರುವವರು 35 ದಿನಗಳ ನಂತರ ಹಾಗೂ ಉಜ್ವಲ ಯೋಜನೆ (PMUY) ಫಲಾನುಭವಿಗಳು 45 ದಿನಗಳ ನಂತರವಷ್ಟೇ ಹೊಸ ಸಿಲಿಂಡರ್ ಬುಕ್ ಮಾಡಬೇಕು ಎಂಬ ವದಂತಿಗಳಿದ್ದವು. ಆದರೆ, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಚಾಲ್ತಿಯಲ್ಲಿರುವ ಅಧಿಕೃತ ನಿಯಮಗಳು ಈ ಕೆಳಗಿನಂತಿವೆ:
ನಗರ ಪ್ರದೇಶಗಳು : ಸಿಲಿಂಡರ್ ಬುಕಿಂಗ್ ನಡುವೆ ಕನಿಷ್ಠ 25 ದಿನಗಳ ಅಂತರವಿರಬೇಕು.
ಗ್ರಾಮೀಣ ಪ್ರದೇಶಗಳು : ಸಿಲಿಂಡರ್ ಬುಕಿಂಗ್ ನಡುವೆ ಕನಿಷ್ಠ 45 ದಿನಗಳ ಅಂತರವಿರಬೇಕು.
ಉಜ್ವಲ ಯೋಜನೆ : ಈ ಯೋಜನೆಯ ಫಲಾನುಭವಿಗಳಿಗೂ ಗ್ರಾಮೀಣ ಭಾಗದಲ್ಲಿ 45 ದಿನಗಳ ನಿಯಮ ಅನ್ವಯಿಸುತ್ತದೆ.
ತಿಳಿಯಲೇಬೇಕಾದ ಮಾಹಿತಿ
ಸುಳ್ಳು ಸುದ್ದಿ ಬೇಡ : ಡಬಲ್ ಬಾಟಲ್ ಕನೆಕ್ಷನ್ (DBC) ಇರುವವರು 35 ದಿನ ಕಾಯಬೇಕು ಎಂಬ ವದಂತಿಗಳನ್ನು ನಂಬಬೇಡಿ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ದಾಸ್ತಾನು ಲಭ್ಯತೆ : ದೇಶದಲ್ಲಿ ಗ್ಯಾಸ್ ಕೊರತೆಯಿಲ್ಲ ಮತ್ತು ಪೂರೈಕೆ ಸಮರ್ಪಕವಾಗಿದೆ. ಹೀಗಾಗಿ ಜನರು ಆತಂಕಗೊಂಡು ಅನಗತ್ಯವಾಗಿ ಅಡ್ವಾನ್ಸ್ ಬುಕಿಂಗ್ (Panic Booking) ಮಾಡದಂತೆ ಸರ್ಕಾರ ಮನವಿ ಮಾಡಿದೆ.
ಲೆಕ್ಕಾಚಾರ : ಈ ಅಂತರವನ್ನು ಸಿಲಿಂಡರ್ ಡೆಲಿವರಿ ಪಡೆದ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆ, ಬುಕಿಂಗ್ ಮಾಡಿದ ದಿನದಿಂದಲ್ಲ.
ಇದನ್ನೂ ಓದಿ : ಮುಡಾ ಕೇಸ್ – ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ತುರ್ತು ನೋಟಿಸ್!



















