ಟೆಹ್ರಾನ್ : ಪಶ್ಚಿಮ ಏಷ್ಯಾ ಯುದ್ಧವು ತೀವ್ರಗೊಂಡಿರುವಂತೆಯೇ ಭಾರತಕ್ಕೆ ಇರಾನ್ ಸಿಹಿಸುದ್ದಿಯೊಂದನ್ನು ನೀಡಿದೆ. ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಸಂಚಾರಕ್ಕೆ ಇರಾನ್ ಅನುವು ಮಾಡಿಕೊಟ್ಟಿದೆ. ಅಲ್ಲದೇ ಭಾರತ ಸೇರಿದಂತೆ ಐದು ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಯಾವುದೇ ದಿಗ್ಬಂಧನ ವಿಧಿಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅಧಿಕೃತವಾಗಿ ಘೋಷಿಸಿದ್ದಾರೆ.
ಮಿತ್ರರಿಗಷ್ಟೇ ವಿಶೇಷ ವಿನಾಯಿತಿ
ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಬ್ಬಾಸ್ ಅರಾಗ್ಚಿ, “ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ. ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿರುವ ಮತ್ತು ಸಮನ್ವಯ ಸಾಧಿಸಿರುವ ದೇಶಗಳಿಗೆ ಸುರಕ್ಷಿತ ಮಾರ್ಗವನ್ನು ಕಲ್ಪಿಸಿಕೊಡುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ಜೊತೆಗೆ ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಇರಾಕ್ ದೇಶಗಳ ಹಡಗುಗಳಿಗೆ ಈ ವಿನಾಯಿತಿ ನೀಡಲಾಗಿದ್ದು, ಇತ್ತೀಚೆಗಷ್ಟೇ ಬಾಂಗ್ಲಾದೇಶದ ಹಡಗುಗಳಿಗೂ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇರಾನ್‌ನ ಈ ನಿರ್ಧಾರವು ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆಗೆ ದೊಡ್ಡ ಆಸರೆಯಾದಂತಾಗಿದೆ.
ಶತ್ರು ರಾಷ್ಟ್ರಗಳಿಗೆ ಪ್ರವೇಶ ನಿಷೇಧ
ಒಂದೆಡೆ ಮಿತ್ರ ರಾಷ್ಟ್ರಗಳಿಗೆ ಮುಕ್ತ ಅವಕಾಶ ನೀಡಿದ್ದರೂ, ಅಮೆರಿಕ, ಇಸ್ರೇಲ್ ಮತ್ತು ಪ್ರಸ್ತುತ ಸಂಘರ್ಷದಲ್ಲಿ ಭಾಗಿಯಾಗಿರುವ ಕೊಲ್ಲಿ ರಾಷ್ಟ್ರಗಳ ಹಡಗುಗಳಿಗೆ ಇರಾನ್ ಕಟ್ಟುನಿಟ್ಟಿನ ದಿಗ್ಬಂಧನ ವಿಧಿಸಿದೆ. “ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ ಮತ್ತು ಈ ಪ್ರದೇಶವು ರಣಾಂಗಣವಾಗಿದೆ. ಹೀಗಿರುವಾಗ ನಮ್ಮ ಶತ್ರು ದೇಶಗಳ ಅಥವಾ ಅವರ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ,” ಎಂದು ಅರಾಗ್ಚಿ ಗುಡುಗಿದ್ದಾರೆ. ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಹೊಂದಿರುವ ಸಾರ್ವಭೌಮತ್ವ ಮತ್ತು ಇರಾನ್‌ನ ದಿಟ್ಟತನವನ್ನು ಜಗತ್ತು ನಂಬಿರಲಿಲ್ಲ, ಆದರೆ ಈಗ ಅದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದೇವೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾರತ ಈಗ ನಿರಾಳ
ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಇತ್ತೀಚೆಗೆ ಹೇರಿದ್ದ ಭಾಗಶಃ ದಿಗ್ಬಂಧನದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿತ್ತು. ವಿಶೇಷವಾಗಿ ಭಾರತವು ತನ್ನ ಅಗತ್ಯದ ಶೇ.90ರಷ್ಟು ಎಲ್‌ಪಿಜಿ (LPG) ಆಮದಿಗೆ ಇದೇ ಮಾರ್ಗವನ್ನು ಅವಲಂಬಿಸಿರುವುದರಿಂದ, ದೇಶದಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಿತ್ತು. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಹೋಟೆಲ್ ಮಾಲೀಕರವರೆಗೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, ಇರಾನ್‌ನ ಹೊಸ ನಿರ್ಧಾರದ ನಂತರ, ಈ ಹಿಂದೆ ಸಿಲುಕಿಕೊಂಡಿದ್ದ ‘ನಂದಾದೇವಿ’ ಮತ್ತು ‘ಶಿವಾಲಿಕ್’ ನಂತಹ ಭಾರತೀಯ ಹಡಗುಗಳು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿವೆ. ಇನ್ನು ಮುಂದೆ ಇನ್ನಷ್ಟು ಹಡಗುಗಳು ಬರಲಿದ್ದು, ಇದರಿಂದ ಭಾರತದಲ್ಲಿ ಉಂಟಾಗಿರುವ ಅನಿಲ ಪೂರೈಕೆಯ ಸಮಸ್ಯೆಗೆ ಸದ್ಯದಲ್ಲೇ ಪರಿಹಾರ ಸಿಗಲಿದೆ.
ಇದನ್ನೂ ಓದಿ : ಸಿಲಿಂಡರ್ ಹೊಡೆತಕ್ಕೆ ಬೇಸತ್ತು ಸೌದೆ ಮೊರೆ ಹೋದ ಹೋಟೆಲ್ ಮಾಲೀಕರು


















