ಬೆಂಗಳೂರು | ಬೆಂಗಳೂರಿನ ಶಕ್ತಿಸೌಧ ಎನಿಸಿಕೊಂಡಿರುವ ವಿಧಾನಸೌಧದಲ್ಲಿ ಸಚಿವರ ಕಚೇರಿಯೊಳಗೆ ಇತ್ತೀಚೆಗೆ ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಘಟನೆ ನಡೆದು ಒಂದು ತಿಂಗಳು ಕಳೆಯುವಷ್ಟರಲ್ಲೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಹೌದು.. ಇಂದು ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿಯ ಮಿನಿ ಬ್ಯಾಗ್ನಲ್ಲಿ 6 ಲಕ್ಷ ರೂಪಾಯಿ ಪತ್ತೆಯಾಗಿದೆ. ಮಾಹಿತಿಗಳ ಪ್ರಕಾರ ವ್ಯಕ್ತಿಯು ಶಾಸಕರೊಬ್ಬರನ್ನು ಭೇಟಿಯಾಗಲು ವಿಧಾನಸೌಧಕ್ಕೆ ಆಗಮನಿಸಿದ್ದು, ಈ ವೇಳೆ ಪೊಲೀಸರು ಯುವಕನ ಬ್ಯಾಗ್ ಪರಿಶೀಲನೆ ವೇಳೆ ಬರೋಬ್ಬರಿ ಆರು ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಇದರಿಂದ ಪೊಲೀಸರು ಶಾಕ್ ಆಗಿದ್ದು, ಕೂಡಲೇ ಯುವಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಯುವಕ ಹೇಳಿದ್ದೇನು?
ಪೊಲೀಸರ ವಿಚಾರಣೆ ವೇಳೆ ಯುವಕ, ‘ನಾನು ಶಾಸಕರನ್ನ ನೋಡಲು ಬಂದಿದ್ದೇನೆ… ಒಳಗೆ ಹೋಗಬೇಕು ಎಂದಿದ್ದಾನೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಲೆಟರ್‌ಹೆಡ್ ಪಡೆಯಲು ವಿಧಾನಸೌಧಕ್ಕೆ ಬಂದಿದ್ದೇನೆ. ನಾನು ಆ ಕ್ಷೇತ್ರದವನು ಎಂದಿದ್ದಾನೆ. ಹಣದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಯುವಕ, ‘ನಮ್ಮ ದೊಡ್ಡಪ್ಪನಿಗೆ ಹುಷಾರಿಲ್ಲ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದಕ್ಕೆ ಹಣ ತಂದಿದ್ದೆ’ ಎಂದು ಹೇಳಿದ್ದಾನೆ. ಸದ್ಯ ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು, ಆತನ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಿದ್ದಾರೆಂದು ತಿಳಿದುಬಂದಿದೆ.
ಕಳೆದ ತಿಂಗಳು ಸಚಿವರ ಕಚೇರಿಯಲ್ಲಿ ಲಕ್ಷಾಂತರ ನಗದು, ಚಿನ್ನಾಭರಣ ಕಳ್ಳತನ!
ಕಳೆದ ತಿಂಗಳು ಫೆಬ್ರವರಿ 10ರಂದು ವಿಧಾನಸೌಧದಲ್ಲಿ ಕಳ್ಳತನ ನಡೆದಿತ್ತು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲ ಕಳವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರನನ್ನ ವಿಧಾನಸೌಧ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : 11 ಅಭಿಮಾನಿಗಳ ನೆನಪಿಗಾಗಿ ಚಿನ್ನಸ್ವಾಮಿಯಲ್ಲಿ ಸ್ಮಾರಕ ನಿರ್ಮಾಣ!


















