ಉತ್ತರ ಕನ್ನಡ | ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್ 3ರ ಮೂಲಕ ಫೇಮಸ್ ಅಗಿದ್ದ ಬಾವತೀಶ್ (28) ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ಸಂಭವಿಸಿದ ಈ ದುರಂತದಲ್ಲಿ ಬಾವತೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೂಲತಃ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ಗ್ರಾಮದ ನಿವಾಸಿಯಾದ ಬಾವತೀಶ್, ಮಂಗಳವಾರ (ಮಾ.24) ಮಧ್ಯಾಹ್ನ ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬಾವತೀಶ್ ಇದ್ದ ಬೈಕ್ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬಾವತೀಶ್ ಅವರ ಬೈಕ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಬಾವತೀಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುಟ್ಟ ಗಾಯಗಳು ಹಾಗೂ ತಲೆಗೆ ಬಿದ್ದ ಬಲವಾದ ಪೆಟ್ಟು ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಬಾವತೀಶ್ ಅನಿರೀಕ್ಷಿತ ಸಾವು ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ನೋವು ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
ಇದನ್ನೂ ಓದಿ : ಗ್ಯಾಸ್ ಅಭಾವದ ಆತಂಕ.. ತುಮಕೂರಲ್ಲಿ ಸಿಲಿಂಡರ್‌ಗಾಗಿ ಮುಗಿಬಿದ್ದ ಜನ!



















