ಬೆಂಗಳೂರು : ಜಲಮಂಡಳಿ ಬೆಂಗಳೂರಿಗರಿಗೆ ಮತ್ತೊಂದು ಸೆಸ್ ಬರೆ ಎಳೆದಿದ್ದು, ಸಾರ್ವಜನಿಕರ ಹಣ ಲೂಟಿ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ N.R ರಮೇಶ್ ದಾಖಲೆ ಸಮೇತ ಆರೋಪ ಮಾಡಿದ್ದಾರೆ.

2023-24ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 2024 ಡಿಸೆಂಬರ್‌ನಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಲಾಗಿದ್ದು, ಜೊತೆಗೆ ಒಳಚರಂಡಿ ಉಪಕರವನ್ನು ಕುಡಿಯುವ ನೀರಿನ ಶುಲ್ಕದ ಶೇ. 25% ರಷ್ಟು ನಿಗದಿ ಮಾಡಲಾಗಿತ್ತು. ನಂತರ 2025ರ ಆರಂಭದಲ್ಲಿ ಇದನ್ನು ಶೇ. 31.25% ರಷ್ಟು ಹೆಚ್ಚಿಸಲಾಯಿತು.
2025ರ ಜನವರಿ 29 ಮತ್ತು ಫೆಬ್ರವರಿ 28ರಂದು ನಡೆದ ಸಭೆಗಳಲ್ಲಿ, BWSSB ಅಧಿಕಾರಿಗಳು ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ದರ ಏರಿಕೆ ಅನಿವಾರ್ಯ ಎಂದು ಸರ್ಕಾರದ ಮುಂದೆ ಪ್ರಸ್ತಾಪಿಸಿದ್ದಾರೆ.
ಹೀಗಾಗಿ ನಿರೀಕ್ಷಿತ ಹೆಚ್ಚಳಗಳು:
- ಆಗಸ್ಟ್ 2025 – ಶೇ. 34.50%
- ಡಿಸೆಂಬರ್ 2025 – ಶೇ. 37.50%
- ಫೆಬ್ರವರಿ 2026 – ಶೇ. 43.75%
ಎನ್. ಆರ್. ರಮೇಶ್ ಪ್ರಕಾರ, ಈ ದರ ಏರಿಕೆ ಕ್ರಮ ಮುಂದುವರಿದರೆ 2028 ಮೇ ವೇಳೆಗೆ ಒಳಚರಂಡಿ ಉಪಕರ ಶೇ. 70.75% ರಷ್ಟಾಗುವ ಸಾಧ್ಯತೆ ಇದೆ.
ನಗರದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರು ಈಗಾಗಲೇ ತೆರಿಗೆ-ಶುಲ್ಕದಿಂದ ಸಂಕಷ್ಟಕ್ಕೊಳಗಾಗಿರುವ ಕಾರಣ, ದರ ಏರಿಕೆ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಮತ್ತು ಜನರ ಮೇಲೆ ಆರ್ಥಿಕ ಭಾರ ಹಾಕುವುದನ್ನು ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಆಗ್ರಹಿಸಲಾಗಿದೆ.



















