ಬೆಂಗಳೂರು: ಗೆಳೆಯರೆಲ್ಲ ಒಟ್ಟಿಗೆ ಸೇರಿದಾಗ, ರಾತ್ರಿ ಆಫೀಸಿನಿಂದ ತಡವಾಗಿ ಮನೆಗೆ ಬಂದಾಗ, ಅಡುಗೆ ಮಾಡಲು ಮನಸ್ಸಿಲ್ಲದಿದ್ದಾಗ ಆನ್‌ಲೈನ್‌ನಲ್ಲಿ ಊಟ, ತಿಂಡಿ ಆರ್ಡರ್ ಮಾಡುವವರ ಸಂಖ್ಯೆ ಜಾಸ್ತಿ ಇದೆ. ಇದರ ಮಧ್ಯೆಯೇ, ಆನ್ ಲೈನ್ ಮೂಲಕ ಊಟ, ತಿಂಡಿ ಆರ್ಡರ್ ಮಾಡುವವರಿಗೆ ಜೊಮ್ಯಾಟೋ ಬ್ಯಾಡ್ ನ್ಯೂಸ್ ನೀಡಿದೆ. ಹೌದು, ಫುಡ್ ಡೆಲಿವರಿ ದೈತ್ಯ ಜೊಮ್ಯಾಟೋ ಈಗ ಪ್ಲಾಟ್ ಫಾರ್ಮ್ ಶುಲ್ಕವನ್ನು ಏರಿಕೆ ಮಾಡಿದೆ. ಇದರಿಂದ ಗ್ರಾಹಕರ ಜೇಬಿಗೆ ಹೊರೆ ಬೀಳಲಿದೆ.
ಹೌದು, ಜೊಮ್ಯಾಟೋ ಕಂಪನಿಯು ಇದುವರೆಗೆ ಪ್ರತಿ ಆರ್ಡರ್ ಮೇಲೆ 12.50 ರೂಪಾಯಿಯನ್ನು ಪ್ಲಾಟ್ ಫಾರ್ಮ್ ಫೀಸ್ ಆಗಿ ತೆಗೆದುಕೊಳ್ಳುತ್ತಿತ್ತು. ಈಗ ಈ ಮೊತ್ತವನ್ನು 14.90 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಂದರೆ, ಒಂದು ಆರ್ಡರ್ ಮೇಲೆ ಶೇ.19ರಷ್ಟು ಅಥವಾ 2.40 ರೂಪಾಯಿ ಜಾಸ್ತಿಯಾದಂತಾಗಿದೆ. ಹಾಗಾಗಿ, ಗ್ರಾಹಕರು ಈಗ ಹೆಚ್ಚಿನ ಮೊತ್ತವನ್ನು ಪಾವತಿಸಿ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಂಟಾಗಿರುವ ಕಾರಣ ಹಾರ್ಮುಜ್ ಜಲಸಂಧಿ ಮುಚ್ಚಿದೆ. ಇದರಿಂದಾಗಿ ಭಾರತಕ್ಕೆ ಸಮರ್ಪಕವಾಗಿ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ. ಹಾಗಾಗಿ, ದೇಶದಲ್ಲಿ ಎಲ್ ಪಿಜಿ ಪೂರೈಕೆಗೆ ಭಾರಿ ಪೆಟ್ಟು ಬಿದ್ದಿದೆ. ಅಡುಗೆ ಅನಿಲ ಸಿಗದ ಕಾರಣ ಹೋಟೆಲ್ ಗಳು ಮುಚ್ಚಿವೆ.
ಹೋಟೆಲ್ ಗಳಲ್ಲಿ ಊಟ-ತಿಂಡಿಯ ಬೆಲೆಯೂ ಜಾಸ್ತಿಯಾಗಿದೆ. ಇದರ ಬೆನ್ನಲ್ಲೇ ಜೊಮ್ಯಾಟೋ ಪ್ಲಾಟ್ ಫಾರ್ಮ್ ಫೀಸ್ ಜಾಸ್ತಿ ಮಾಡಿದೆ. ಇದುವರೆಗೆ ಗ್ರಾಹಕರು ಪ್ರತಿ ಆರ್ಡರ್ ಗೆ ರೆಸ್ಟೋರೆಂಟ್ ಬಿಲ್, ಡೆಲಿವರಿ ಮಾಡುವ ಚಾರ್ಜ್ ಹಾಗೂ ಜಿಎಸ್ ಟಿ ಶುಲ್ಕಗಳನ್ನು ಪಾವತಿಸುತ್ತಿದ್ದರು. ಮುಂದೆಯೂ ಇವುಗಳ ಜತೆಗೆ ಈಗ ಪ್ಲಾಟ್ ಫಾರ್ಮ್ ಫೀಸ್ ಅನ್ನು ಹೆಚ್ಚು ಪಾವತಿಸಬೇಕಾಗಿದೆ.



















