ಹಾವೇರಿ: ಐತಿಹಾಸಿಕ ಮಲ್ಲೇಶ್ವರ ಗುಡ್ಡ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ, ಅರಣ್ಯ ಭಾಗ ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಆರೇಮಲ್ಲಾಪುರ ಹಾಗೂ ಐರಣಿ ಗ್ರಾಮಗಳ ಸಮೀಪದ ಮಲ್ಲೇಶ್ವರ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಕಳೆದ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ, ವಿಶಾಲ ಪ್ರದೇಶ ಹಾನಿಗೀಡಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಘಟನೆ ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಇತ್ತೀಚೆಗೆ ಸರ್ಕಾರ ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಆದರೆ ಇದೀಗ ಅದೇ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಸಂಪದ್ಭರಿತ ವನಸ್ಪತಿ, ಗಿಡಮೂಲಿಕೆಗಳು, ಹಾಗೂ ಕೃಷ್ಣಮೃಗ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳು ವಾಸಿಸುವ ಅಭಯಾರಣ್ಯ ಪ್ರದೇಶದಲ್ಲಿ ಈ ಬೆಂಕಿ ಅವಘಡ ಸಂಭವಿಸಿರುವುದರಿಂದ ಪರಿಸರಕ್ಕೆ ದೊಡ್ಡ ಹಾನಿ ಉಂಟಾಗಿದೆ.
ಇದನ್ನೂ ಓದಿ : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ : ತಪ್ಪಿದ ಅನಾಹುತ



















