ಚಿಕ್ಕಮಗಳೂರು : ಸುಮಾರು 7 ಜನ ವಿದ್ಯಾರ್ಥಿಗಳ ಮೇಲೆ ಶಾಲೆಯ ಪ್ರಿನ್ಸಿಪಾಲ್ ಹಾಗೂ ಸಿಬ್ಬಂದಿ ಮನಸೋ ಇಚ್ಛೆ ಥಳಿಸಿ, ರೂಮಿನಲ್ಲಿ ಕೂಡಿ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಏಕಲವ್ಯ ವಸತಿ ಶಾಲೆಯಲ್ಲಿ ನಡೆದಿದೆ.
ರಾತ್ರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು, ಬೆಳಗ್ಗೆ 7 ಜನ ವಿದ್ಯಾರ್ಥಿಗಳು ಅನುಮತಿ ಪಡೆಯದೆ ಮೈದಾನದಲ್ಲಿ ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪ್ರಿನ್ಸಿಪಾಲ್, ಪ್ಲಾಸ್ಟಿಕ್ ಪೈಪ್, ಬೆಲ್ಟ್‌ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ವಸತಿ ಶಾಲೆಯ ರೂಮ್‌ನಲ್ಲಿ ಕೂಡಿಹಾಕಿದ್ದಾರೆ ಎಂಬ ಗಂಭೀರ ಆಆರೋಪ ಕೇಳಿಬಂದಿದೆ.
ವಿದ್ಯಾರ್ಥಿಗಳ ಕೂಗಾಟ ಕೇಳಿ ವಸತಿ ಶಾಲೆಯ ಪಕ್ಕದಲ್ಲೇ ಇರುವ ಕಾಫಿ ತೋಟದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೂಮಿನಲ್ಲಿದ್ದ 7 ಜನ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ ವಿಚಾರಣೆ ನಡೆಸಿದ್ದಾರೆ.
ಪ್ರಿನ್ಸಿಪಾಲ್ ಸತೀಶ್, ಸಿಬ್ಬಂದಿ ಶುಭಮ್ ವಿದ್ಯಾರ್ಥಿಗಳ ಕೈ-ಕಾಲುಗಳಿಗೆ ಬಾಸುಂಡೆ ಬರುವಂತೆ ಥಳಿಸಿರುವ ಬಗ್ಗೆ ವಿದ್ಯಾರ್ಥಿಗಳು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಬಳಿಕ ಗಾಯಗೊಂಡ ವಿದ್ಯಾರ್ಥಿಗಳನ್ನು ಪೊಲೀಸರು ಮೂಡಿಗೆರೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ : ಡಿಜಿಟಲ್ ಅರೆಸ್ಟ್.. ವೃದ್ಧ ಉದ್ಯಮಿಯಿಂದ ಬರೋಬ್ಬರಿ 15 ಕೋಟಿ ರೂ. ಪೀಕಿದ ಸೈಬರ್ ವಂಚಕರು!



















