ಬೆಂಗಳೂರು: ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳ ಕುರಿತು ಎದ್ದಿರುವ ಭಾರೀ ವಿವಾದ ಹಾಗೂ ಹಾಡಿನಲ್ಲಿರುವ ಅಶ್ಲೀಲ ಅಂಶಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಖ್ಯಾತ ಗಾಯಕಿ ಮಂಗ್ಲಿ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ, ಹಾಡಿನಲ್ಲಿ ಕಾಣಿಸಿಕೊಂಡಿರುವ ನಟಿ ನೋರಾ ಫತೇಹಿ ಅವರು ಚಿತ್ರತಂಡದ ವಿರುದ್ಧವೇ ಕಿಡಿಕಾರಿದ್ದಾರೆ.
ಹಾಡಿನ ಸಾಹಿತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾದ ನಂತರ, ಗಾಯಕಿ ಮಂಗ್ಲಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. “ಜನಸಾಮಾನ್ಯರ ಭಾವನೆಗಳಿಗೆ ಗೌರವ ನೀಡಿ, ಈ ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ಅರಿಯದೆ ನಡೆದ ಈ ತಪ್ಪಿಗೆ ನಾನು ಪ್ರತಿಯೊಬ್ಬರಲ್ಲೂ ಕ್ಷಮೆಯಾಚಿಸುತ್ತೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ತಮಗಿರಲಿಲ್ಲ ಎಂದಿರುವ ಅವರು, ಸಾಹಿತ್ಯವನ್ನು ತಿದ್ದಲಾಗಿದ್ದು, ಪರಿಷ್ಕೃತ ಆವೃತ್ತಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಚಿತ್ರತಂಡಕ್ಕೆ ಸಹಕಾರಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಚಿತ್ರತಂಡದ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ
ಒಂದೆಡೆ ಮಂಗ್ಲಿ ಕ್ಷಮೆ ಕೇಳಿದ್ದರೆ, ಮತ್ತೊಂದೆಡೆ ಹಾಡಿನಲ್ಲಿ ನಟಿಸಿರುವ ಬಾಲಿವುಡ್ ನಟಿ ನೋರಾ ಫತೇಹಿ ಈ ಇಡೀ ವಿವಾದದಿಂದ ದೂರವಿರುವುದಾಗಿ ಘೋಷಿಸಿದ್ದಾರೆ. ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು, “ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆಯೇ ಚಿತ್ರೀಕರಿಸಿದ್ದೆ. ಅದು ‘ನಾಯಕ್ ನಹಿ ಖಲ್ನಾಯಕ್ ಹೂ ಮೇ’ ಹಾಡಿನ ರಿಮೇಕ್ ಎಂದು ನನಗೆ ಹೇಳಲಾಗಿತ್ತು. ನನಗೆ ಕನ್ನಡ ಅರ್ಥವಾಗದ ಕಾರಣ ಅವರು ಹೇಳಿದ್ದನ್ನು ನಂಬಿದ್ದೆ. ಆದರೆ ಈಗ ಹಿಂದಿಗೆ ಡಬ್ ಮಾಡುವಾಗ ನನ್ನ ಅನುಮತಿ ಪಡೆಯದೆ ಅಶ್ಲೀಲ ಸಾಹಿತ್ಯ ಬಳಸಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಲಾಂಚ್ ಈವೆಂಟ್‌ನಲ್ಲಿ ಎಐ (AI) ಫೋಟೋಗಳನ್ನು ಬಳಸಿದ್ದಕ್ಕೂ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರಾಜೆಕ್ಟ್‌ನಿಂದ ತಾವು ಮೊದಲೇ ದೂರ ಸರಿದಿರುವುದಾಗಿ ತಿಳಿಸಿದ್ದಾರೆ.
ಹೊಣೆಗಾರಿಕೆ ಬಗ್ಗೆ ನೋರಾ ಖಡಕ್ ಮಾತು
ಕಲಾವಿದರಿಗೆ ಚಿತ್ರದ ಅಂತಿಮ ಔಟ್‌ಪುಟ್ ಮೇಲೆ ಹೆಚ್ಚಿನ ನಿಯಂತ್ರಣ ಇರುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ನೋರಾ ಫತೇಹಿ, “ಇಂತಹ ವಿಷಯಗಳನ್ನು ಸೃಷ್ಟಿಸುವ ನಿರ್ದೇಶಕರು ಮತ್ತು ನಿರ್ಮಾಪಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಕೇವಲ ನಮ್ಮ ಹೆಸರನ್ನು ಬಳಸಿಕೊಂಡು ವಿಕೃತಿ ಮೆರೆಯಬಾರದು. ಈ ವಿವಾದಾತ್ಮಕ ಹಾಡಿನ ವಿರುದ್ಧ ಜನರು ಧ್ವನಿ ಎತ್ತಿದ್ದಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ, ಏಕೆಂದರೆ ಈ ಆಕ್ರೋಶವೇ ಚಿತ್ರತಂಡ ಹಾಡನ್ನು ತೆಗೆದುಹಾಕುವಂತೆ ಮಾಡಿದೆ” ಎಂದು ಹೇಳಿದ್ದಾರೆ.
ಈ ಹಾಡಿನ ವಿರುದ್ಧ ಕೇವಲ ನೆಟ್ಟಿಗರು ಮಾತ್ರವಲ್ಲದೆ, ಅಖಿಲ ಭಾರತ ಸಿನಿ ಕಾರ್ಮಿಕರ ಸಂಘ (AICWA), ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತು ಗಾಯಕ ಅರ್ಮಾನ್ ಮಲಿಕ್ ಕೂಡ ಧ್ವನಿ ಎತ್ತಿದ್ದರು. ಹಾಡಿನ ಸಾಹಿತ್ಯ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದ್ದರು. ಇಷ್ಟೇ ಅಲ್ಲದೆ, ದೆಹಲಿ ಪೊಲೀಸರ ಸೈಬರ್ ಸೆಲ್‌ನಲ್ಲಿ ಈ ಹಾಡಿನ ವಿರುದ್ಧ ಕ್ರಿಮಿನಲ್ ದೂರನ್ನು ಸಹ ದಾಖಲಿಸಲಾಗಿತ್ತು. ಇಷ್ಟೆಲ್ಲಾ ಒತ್ತಡಗಳು ಎದುರಾದ ನಂತರವೇ ಚಿತ್ರತಂಡ ಹಾಡನ್ನು ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.



















