ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ತುಂಗಭದ್ರಾ ನದಿ ದಡದಲ್ಲಿ ಅಕ್ರಮ ಮರಳು ಮಾಫಿಯಾ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಹೊನ್ನಾಳಿಯ ಜೀವನಾಡಿಯಾದ ತುಂಗಭದ್ರಾ ನದಿ ಮರಳು ದಂಧೆಕೋರರಿಗೆ ಅಕ್ಷಯಪಾತ್ರೆಯಂತಾಗಿದ್ದು, ಹಗಲು-ರಾತ್ರಿ ಎನ್ನದೆ ನದಿಯ ಒಡಲನ್ನು ಬಗೆಯಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.
ಬಿದರಗಡ್ಡೆ ಹಾಗೂ ಹೊಳೆಮಾದಾಪುರ ಗ್ರಾಮಗಳ ಸುತ್ತಮುತ್ತ ನದಿ ಪಾತ್ರದಲ್ಲಿ ಮರಳು ಮಾಫಿಯಾ ಯಗ್ಗಿಲ್ಲದೆ ಅಬ್ಬರಿಸುತ್ತಿದ್ದು, ಪರಿಸರ ಹಾನಿಯಾದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಗಮನಕ್ಕೆ ವಿಷಯ ಬಂದಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.
ಸ್ಥಳೀಯರು ಪ್ರಶ್ನೆ ಮಾಡಿದರೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪರವಾನಗಿ ಇಲ್ಲದೆ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ತಡೆದು ಪ್ರಶ್ನಿಸಿದ ಪ್ರಶಾಂತ್ ಬಣ್ಣಜ್ಜಿ ಅವರಿಗೆ ಹೊಳೆಮಾದಾಪುರದ ದೇವೇಂದ್ರ ಎಂಬಾತ ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಮರಳು ತುಂಬಿದ ಟ್ರಾಕ್ಟರ್‌ಗಳು ಪೊಲೀಸ್ ಚೌಕಿಗಳ ಮುಂದೆ ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರ ಸಮ್ಮತಿಯಿಂದಲೇ ದಂಧೆ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಬಲಗೊಂಡಿದೆ.
ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂಪಾಯಿ ತೆರಿಗೆ ಹಣ ಮಾಫಿಯಾ ಪಾಲಾಗುತ್ತಿರುವುದಾಗಿ ಆರೋಪಿಸಲಾಗಿದ್ದು, ನದಿ ಪಾತ್ರದ ಗ್ರಾಮಸ್ಥರು ಧ್ವನಿ ಎತ್ತಿದರೆ ಅವರಿಗೆ ಬೆದರಿಕೆ ಎದುರಾಗುತ್ತಿದೆ ಎನ್ನಲಾಗಿದೆ.
ಇದ್ನೂ ಓದಿ : ಕುಡಿದ ಮತ್ತಲ್ಲಿ ವಿದೇಶಿ ಪ್ರಜೆಯ ರಂಪಾಟ.. ವಾಹನಗಳನ್ನು ಅಡ್ಡಗಟ್ಟಿ ಕಿರಿಕ್!



















