ಬೆಂಗಳೂರು : ಕರ್ನಾಟಕದಲ್ಲಿ ಯುಗಾದಿಗೂ ಮುನ್ನವೇ ಬೇಸಿಗೆ ಮಳೆ ಶುರುವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಜೋರು ಮಳೆ ಸುರಿದಿದೆ. ಆ ಮೂಲಕ ಬಿಸಿಲಿಂದ ಬೆಂಡಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ.
ಇತ್ತ ಸಿಲಿಕಾನ್ ಸಿಟಿಗೂ ಮಳೆಯ ಸಿಂಚನವಾಗಿದ್ದು, ಸಂಜೆಯಾಗುತ್ತಿದ್ದಂತೆ ಹೆಬ್ಬಾಳ, ಸಂಜಯನಗರ, ಭೂಪಸಂದ್ರ, ನಾಗಶೆಟ್ಟಿಹಳ್ಳಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆಯಾಗಿದೆ. ಇನ್ನು ಕೆಂಗೇರಿ ಸುತ್ತುಮುತ್ತ ಜೋರು ಮಳೆ ಸುರಿದಿದ್ದು, ರಿಚ್ಮಂಡ್ ಟೌನ್ ಸುತ್ತಮುತ್ತ ತುಂತುರು ಮಳೆ ಸುರಿದಿದೆ.
ಯಲಹಂಕ ಸುತ್ತಮುತ್ತಲೂ ಸಂಜೆ ಸುಮಾರು ಒಂದು ಗಂಟೆಯಿಂದ ನಿರಂತರವಾಗಿ ಮಳೆಯಾಗಿದೆ. ಯಲಹಂಕ ಮೊದಲ ಹಾಗೂ ಎರಡನೇ ಹಂತ, ಯಲಹಂಕ ನ್ಯೂ ಟೌನ್, ಅಟ್ಟೂರು ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ.
ಇಂದಿನಿಂದ ಮುಂದಿನ 4 ದಿನಗಳವರೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಕೊನೆಗೂ ಸಸ್ಪೆಂಡ್!



















