ಅಹಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಕದನದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಬಗ್ಗುಬಡಿಯುವ ಮೂಲಕ ಟೀಮ್ ಇಂಡಿಯಾ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಸತತ ಎರಡು ಆವೃತ್ತಿಗಳಲ್ಲಿ ಈ ಪ್ರತಿಷ್ಠಿತ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆ ಮಾಡಿರುವ ಭಾರತ, ತವರು ನೆಲದಲ್ಲಿ ಈ ಪ್ರಶಸ್ತಿ ಜಯಿಸಿದ ಮೊದಲ ರಾಷ್ಟ್ರವಾಗಿಯೂ ಹೊರಹೊಮ್ಮಿದೆ.
ಒಟ್ಟಾರೆಯಾಗಿ ಇದು ಟೀಮ್ ಇಂಡಿಯಾದ ಮೂರನೇ ಟಿ20 ವಿಶ್ವಕಪ್ ಕಿರೀಟವಾಗಿದೆ. ಈ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆ ಮುಂದುವರಿದಿದ್ದು, ತವರಿಗೆ ಮರಳಿದ ಆಟಗಾರರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಮುಂಬೈನಲ್ಲಿ ಬೃಹತ್ ವಿಜಯೋತ್ಸವ ಮೆರವಣಿಗೆಯೂ ನಡೆದಿದ್ದು, ತಂಡದ ಕೋಚ್ ಗೌತಮ್ ಗಂಭೀರ್ ಹಾಗೂ ಆಟಗಾರ ಸೂರ್ಯಕುಮಾರ್ ಯಾದವ್ ಮುಂಬೈನ ದೇವಾಲಯವೊಂದಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಭರ್ಜರಿ ಯಶಸ್ಸಿನ ನಡುವೆ ಸ್ಪಿನ್ನರ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಾರೆ ವರುಣ್ ಚಕ್ರವರ್ತಿ ಅವರು ಭಾರತದ ಗೆಲುವಿನ ಹಿಂದಿರುವ ಒಂದು ಸ್ವಾರಸ್ಯಕರ ‘ಸೀಕ್ರೆಟ್’ ಅನ್ನು ಹಂಚಿಕೊಂಡಿದ್ದಾರೆ.
ವಿಶ್ವಕಪ್ ಗೆಲುವಿಗೂ ಕೇರಳ-ಪಂಜಾಬ್ ಆಟಗಾರರಿಗೂ ಇರುವ ನಂಟು
ಭಾರತ ತಂಡ ಐಸಿಸಿ ವಿಶ್ವಕಪ್ ಗೆದ್ದಾಗಲೆಲ್ಲಾ ತಂಡದಲ್ಲಿ ಒಂದು ವಿಶೇಷ ಕಾಕತಾಳೀಯ ಘಟನೆ ಮರುಕಳಿಸುತ್ತಲೇ ಬಂದಿರುವುದು ಈಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ಮೊದಲ ಬಾರಿ ವಿಶ್ವಕಪ್ ಗೆದ್ದಾಗಿನಿಂದ ಹಿಡಿದು 2026ರ ಟಿ20 ವಿಶ್ವಕಪ್‌ವರೆಗೂ, ವಿಜೇತ ತಂಡದಲ್ಲಿ ಪಂಜಾಬ್ ಹಾಗೂ ಕೇರಳ ಮೂಲದ ತಲಾ ಒಬ್ಬ ಆಟಗಾರ ಕಡ್ಡಾಯವಾಗಿ ಇದ್ದೇ ಇದ್ದಾರೆ. 1983ರಲ್ಲಿ ಬಲ್ವಿಂದರ್ ಸಿಂಗ್ ಸಂಧು (ಪಂಜಾಬ್) ಹಾಗೂ ಸುನಿಲ್ ವಾಲ್ಸನ್, 2011ರ ಏಕದಿನ ವಿಶ್ವಕಪ್‌ನಲ್ಲಿ ಹರ್ಭಜನ್ ಸಿಂಗ್ (ಪಂಜಾಬ್) ಹಾಗೂ ಎಸ್. ಶ್ರೀಶಾಂತ್ (ಕೇರಳ) ಈ ವಿಶಿಷ್ಟ ಕಾಂಬಿನೇಷನ್‌ನಲ್ಲಿದ್ದರು. ಅದೇ ರೀತಿ, 2024 ಮತ್ತು ಇದೀಗ 2026ರ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಅರ್ಷದೀಪ್ ಸಿಂಗ್ (ಪಂಜಾಬ್) ಹಾಗೂ ಸಂಜು ಸ್ಯಾಮ್ಸನ್ (ಕೇರಳ) ಪ್ರಮುಖ ಪಾತ್ರ ವಹಿಸುವ ಮೂಲಕ ಈ ರೋಚಕ ಇತಿಹಾಸವನ್ನು ಮುಂದುವರಿಸಿದ್ದಾರೆ.
‘ಮಲಯಾಳಿ’ ಆಟಗಾರನಿದ್ದರೆ ಕಪ್ ನಮ್ಮದೇ ಎಂದ ವರುಣ್
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಸಿಸಿಐನ ‘ನಮನ್ ಅವಾರ್ಡ್ಸ್’ ಸಮಾರಂಭದಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ತಮಾಷೆಯಾಗಿ ಈ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೀಮ್‌ಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಟೀಮ್ ಇಂಡಿಯಾದಲ್ಲಿ ಕನಿಷ್ಠ ಒಬ್ಬ ಮಲಯಾಳಿ (ಮಲ್ಲು) ಆಟಗಾರನಿದ್ದರೆ, ನಾವು ಖಂಡಿತ ಐಸಿಸಿ ಟ್ರೋಫಿ ಗೆಲ್ಲುತ್ತೇವೆ ಎಂಬ ಮಾತಿದೆ. ಹಾಗಾಗಿ, ಆಡುವ ಹನ್ನೊಂದರ ಬಳಗದಲ್ಲಿ ಕೇರಳದ ಸಂಜು ಸ್ಯಾಮ್ಸನ್ ಅವರನ್ನು ಸೇರಿಸಿಕೊಂಡಿದ್ದು ನಿಜಕ್ಕೂ ದೊಡ್ಡ ‘ಮಾಸ್ಟರ್ ಸ್ಟ್ರೋಕ್’ ಆಗಿತ್ತು ಎಂದು ಹೇಳುವ ಮೂಲಕ ನೆರೆದಿದ್ದವರ ಮೊಗದಲ್ಲಿ ನಗು ತರಿಸಿದರು.
ವಿರಾಟ್ ಕೊಹ್ಲಿ ದಾಖಲೆ ಮುರಿದ ಟೂರ್ನಿಯ ಶ್ರೇಷ್ಠ ಆಟಗಾರ ಸಂಜು
ವರುಣ್ ಚಕ್ರವರ್ತಿ ಅವರ ಮಾತು ಕೇವಲ ತಮಾಷೆಯಾಗಿದ್ದರೂ, ಈ ಬಾರಿಯ ವಿಶ್ವಕಪ್‌ನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಕೊಡುಗೆ ನಿಜಕ್ಕೂ ಅಪಾರವಾದದ್ದು. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅವರು ಕಣಕ್ಕಿಳಿದಿರಲಿಲ್ಲ. ಆದರೆ ಅಭಿಷೇಕ್ ಶರ್ಮಾ ಅವರು ಹೊಟ್ಟೆನೋವಿನ ಸಮಸ್ಯೆಯಿಂದ ಬಳಲಿದಾಗ ಅವಕಾಶ ಪಡೆದ ಸಂಜು, ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ತಂಡದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡದ ಅವರು, ಸೂಪರ್-8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಅಜೇಯ 97, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 89 ಹಾಗೂ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 89 ರನ್ ಸಿಡಿಸಿ ಸತತ ಮೂರು ನಿರ್ಣಾಯಕ ಅರ್ಧಶತಕಗಳೊಂದಿಗೆ ಅಬ್ಬರಿಸಿದರು. ಟೂರ್ನಿಯಲ್ಲಿ 80.25ರ ಅತ್ಯುತ್ತಮ ಸರಾಸರಿಯಲ್ಲಿ 321 ರನ್‌ಗಳನ್ನು ಕಲೆಹಾಕಿದ ಅವರು ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಟಿ20 ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ವಿರಾಟ್ ಕೊಹ್ಲಿ (314 ರನ್) ಅವರ ದಾಖಲೆಯನ್ನೂ ಸಂಜು ಅಳಿಸಿಹಾಕಿದ್ದಾರೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡವನ್ನು ಪ್ರತಿನಿಧಿಸಲಿದ್ದಾರೆ.
ಬೌಲಿಂಗ್‌ನಲ್ಲಿ ಮಿಂಚಿದ ವರುಣ್ ಮತ್ತು ಬುಮ್ರಾ
ಬ್ಯಾಟಿಂಗ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್ ರನ್ ಹೊಳೆ ಹರಿಸಿದರೆ, ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಹಾಗೂ ಜಸ್ಪ್ರೀತ್ ಬುಮ್ರಾ ಜಂಟಿಯಾಗಿ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದರು. ಟೂರ್ನಿಯುದ್ದಕ್ಕೂ ಅಮೋಘ ದಾಳಿ ಸಂಘಟಿಸಿದ ಇಬ್ಬರೂ ತಲಾ 14 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವರುಣ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದರೆ, ಬುಮ್ರಾ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್‌ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿದು ಎದುರಾಳಿಗಳನ್ನು ಬೇಟೆಯಾಡಿದ ಈ ಇಬ್ಬರು, ಐಪಿಎಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ.
ಇದನ್ನೂ ಓದಿ : ಹೊಸ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳು ಹೇಗಿರುತ್ತವೆ? ಬದಲಾವಣೆ ಇದೆಯೇ? ಇಲ್ಲಿದೆ ಮಾಹಿತಿ



















