ಧಾರವಾಡ : ಜೈಲುಗಳು ಕೈದಿಗಳು ಪಶ್ಚಾತ್ತಾಪ ಪಡುವ ಶಿಕ್ಷಾ ತಾಣಗಳಾಗಬೇಕು. ಆದರೆ ಧಾರವಾಡದ ಕೇಂದ್ರ ಕಾರಾಗೃಹ ಕೈದಿಗಳ ಪಾಲಿಗೆ ‘ಪಂಚತಾರಾ ಹೋಟೆಲ್’ ಆಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಮೂಡುವಂತಹ ಘಟನೆ ಬೆಳಕಿಗೆ ಬಂದಿದೆ.
ಪೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಕೈದಿ ಪರ್ವೇಜ್ ಎಂಬಾತ ಹೊರಗಿನ ಬಾಲಕಿಯೊಂದಿಗೇ ಜೈಲಿನಿಂದಲೇ ಮೊಬೈಲ್ ಮೂಲಕ ಮಾತನಾಡಿರುವ ಆಡಿಯೋ ಇದೀಗ ಸಂಚಲನ ಮೂಡಿಸಿದೆ. ಆಡಿಯೋದಲ್ಲಿ “ಜೈಲಿನಲ್ಲಿ ಹಣ ಕೊಟ್ಟರೆ ಸಾಕು ಸಿಗರೇಟ್, ಸರಾಯಿ (ಮದ್ಯ) ಮತ್ತು ಮೊಬೈಲ್ ಸೇರಿದಂತೆ ಎಲ್ಲವೂ ಸಿಗುತ್ತದೆ. 300 ರೂಪಾಯಿ ನೀಡಿದರೆ ಸಿಗರೇಟ್ ಪ್ಯಾಕೆಟ್ ಕೈ ಸೇರುತ್ತದೆ” ಎಂದು ಆತ ಹೇಳಿರುವುದು ಕೇಳಿಬಂದಿದೆ.
ಇದೇ ಜೈಲಿನಲ್ಲಿ ಹಾವೇರಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಕೂಡ ಇದ್ದಾನೆ. ಬಾಲಕಿಯು “ನೇಹಾ ಕೊಲೆಗಡುಕ ಫಯಾಜ್ ಅಲ್ಲೇ ಇದ್ದಾನಾ?” ಎಂದು ಕೇಳಿದಾಗ, “ಹೌದು, ನಾವೆಲ್ಲರೂ ಒಂದೇ ಸೆಲ್‌ನಲ್ಲಿ ಹಾಯಾಗಿದ್ದೇವೆ. ಇಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮವಿಲ್ಲ, ಕ್ಯಾಂಟೀನ್ ಕೂಡ ಇದೆ” ಎಂದು ಪರ್ವೇಜ್ ಉತ್ತರಿಸಿರುವುದು ಆಡಿಯೋದಲ್ಲಿ ಕೇಳಿಬಂದಿದೆ.
ಜೈಲಿನೊಳಗೆ ಮೊಬೈಲ್ ಹಾಗೂ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿರುವುದರಿಂದ ಅಲ್ಲಿನ ಸಿಬ್ಬಂದಿ ಮತ್ತು ಕೈದಿಗಳ ನಡುವಿನ ಅಕ್ರಮ ಸಂಪರ್ಕಗಳ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಇತ್ತೀಚೆಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲುಗಳಲ್ಲಿ ಡ್ರಗ್ಸ್ ಮತ್ತು ಮೊಬೈಲ್ ಜಾಲವನ್ನು ಮುರಿಯಲು ಡ್ರಗ್ ಟೆಸ್ಟ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದ್ದರು. ಆದರೆ ಧಾರವಾಡ ಜೈಲಿನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವುದು ಇಲಾಖೆಯ ಕ್ರಮಗಳಿಗೆ ಸವಾಲು ಎಸೆದಂತಾಗಿದೆ.
ಇದನ್ನೂ ಓದಿ : ಜೈಲುಗಳಲ್ಲಿ ಡ್ರಗ್ಸ್ ನೆಟ್‌ವರ್ಕ್‌ಗೆ ಬ್ರೇಕ್ ಹಾಕಲು ಡಿಜಿಪಿ ಹೊಸ ಪ್ಲ್ಯಾನ್!



















