ನವದೆಹಲಿ : ಇಂಗ್ಲೆಂಡ್‌ನ ಜನಪ್ರಿಯ ‘ದಿ ಹಂಡ್ರೆಡ್’ ಮಹಿಳಾ ಕ್ರಿಕೆಟ್ ಟೂರ್ನಿಯ ಮುಂಬರುವ ಆವೃತ್ತಿಯ ಹರಾಜು ಪ್ರಕ್ರಿಯೆ ಬುಧವಾರ (ಮಾರ್ಚ್ 11) ನಡೆದಿದ್ದು, ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ತಂಡದ ಪಾಲಾಗಿದ್ದಾರೆ. ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ದಿ ಹಂಡ್ರೆಡ್ ಟೂರ್ನಿಯಲ್ಲೂ ರಿಚಾ ಘೋಷ್ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.
ಮತ್ತೊಂದೆಡೆ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ‘ಸನ್‌ರೈಸರ್ಸ್ ಲೀಡ್ಸ್’ ತಂಡಕ್ಕೆ ಬಿಕರಿಯಾಗಿದ್ದಾರೆ. ಬುಧವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ರಿಚಾ ಘೋಷ್ ಅವರನ್ನು ಮ್ಯಾಂಚೆಸ್ಟರ್ ಫ್ರಾಂಚೈಸಿಯು 50,000 ಪೌಂಡ್‌ಗಳಿಗೆ (ಸುಮಾರು 54 ಲಕ್ಷ ರೂ.) ಖರೀದಿಸಿತು. ಬಿಡ್ಡಿಂಗ್ ಆರಂಭವಾದಾಗ ಬೇರೆ ಯಾವುದೇ ಫ್ರಾಂಚೈಸಿಗಳು ಪೈಪೋಟಿ ನಡೆಸದ ಕಾರಣ ರಿಚಾ ಸುಲಭವಾಗಿ ಮ್ಯಾಂಚೆಸ್ಟರ್ ಪಾಲಾದರು. ಇತ್ತೀಚೆಗಷ್ಟೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ರಿಚಾ ಘೋಷ್ ಹಾಗೂ ಸ್ಮೃತಿ ಮಂಧಾನ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ದಿ ಹಂಡ್ರೆಡ್ ಟೂರ್ನಿಯಲ್ಲೂ ಈ ಜೋಡಿ ಮ್ಯಾಂಚೆಸ್ಟರ್ ಬ್ಯಾಟಿಂಗ್ ಪಡೆಯ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.
ಸ್ಮೃತಿ ಮಂಧಾನ ಜನವರಿಯಲ್ಲೇ ನೇರ ಒಪ್ಪಂದದ ಮೂಲಕ ಮ್ಯಾಂಚೆಸ್ಟರ್ ತಂಡ ಸೇರಿದ್ದರು. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ್ತಿ ಮೆಗ್ ಲ್ಯಾನಿಂಗ್ ಹಾಗೂ ಇಂಗ್ಲೆಂಡ್‌ನ ಸ್ಟಾರ್ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಸಹ ಇದೇ ತಂಡದಲ್ಲಿದ್ದು, ತಂಡದ ಬಲ ದುಪ್ಪಟ್ಟಾಗಿದೆ.
ಸನ್‌ರೈಸರ್ಸ್‌ಗೆ ದೀಪ್ತಿ ಶರ್ಮಾ
ಭಾರತದ ಪ್ರಮುಖ ಸ್ಪಿನ್ ಆಲ್‌ರೌಂಡರ್ ದೀಪ್ತಿ ಶರ್ಮಾ 27,500 ಪೌಂಡ್‌ಗಳಿಗೆ ಸನ್‌ರೈಸರ್ಸ್ ಲೀಡ್ಸ್ (Sunrisers Leeds) ತಂಡವನ್ನು ಸೇರಿಕೊಂಡಿದ್ದಾರೆ. ಇವರ ಖರೀದಿಗೂ ಯಾವುದೇ ಫ್ರಾಂಚೈಸಿಗಳು ಪೈಪೋಟಿ ನಡೆಸಲಿಲ್ಲ. ಈ ಹಿಂದೆ ಲಂಡನ್ ಸ್ಪಿರಿಟ್ ತಂಡದ ಪರ ಮಿಂಚಿದ್ದ ದೀಪ್ತಿ, ವಿಶ್ವದ ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡಿದ ಅಪಾರ ಅನುಭವ ಹೊಂದಿದ್ದಾರೆ. ಒತ್ತಡದ ಪರಿಸ್ಥಿತಿಯಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವಿರುವ ದೀಪ್ತಿಯ ಆಗಮನವು ಸನ್‌ರೈಸರ್ಸ್ ಲೀಡ್ಸ್ ತಂಡಕ್ಕೆ ದೊಡ್ಡ ಬೂಸ್ಟ್ ನೀಡಿದೆ.
ಸದರ್ನ್ ಬ್ರೇವ್ ತಂಡದಲ್ಲಿ ಜೆಮಿಮಾ
ಇತರ ಭಾರತೀಯ ಆಟಗಾರ್ತಿಯರ ಪೈಕಿ, ಮಧ್ಯಮ ಕ್ರಮಾಂಕದ ಆಧಾರಸ್ತಂಭ ಜೆಮಿಮಾ ರಾಡ್ರಿಗಸ್ ‘ಸದರ್ನ್ ಬ್ರೇವ್’ (Southern Brave) ತಂಡದ ಪರ ಆಡಲಿದ್ದಾರೆ. 60,000 ಪೌಂಡ್‌ಗಳ ನೇರ ಒಪ್ಪಂದದ ಮೂಲಕ ಅವರು ತಂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಸನ್‌ರೈಸರ್ಸ್ ಲೀಡ್ಸ್ ಪರ ಆಡಿದ್ದ ಜೆಮಿಮಾಗೆ ದಿ ಹಂಡ್ರೆಡ್ ಟೂರ್ನಿಯಲ್ಲಿ ಇದು ಎರಡನೇ ಫ್ರಾಂಚೈಸಿಯಾಗಿದೆ. ಈ ಟೂರ್ನಿಯಲ್ಲಿ ಇದುವರೆಗೆ 19 ಪಂದ್ಯಗಳನ್ನಾಡಿರುವ ಅವರು, 4 ಅದ್ಭುತ ಅರ್ಧಶತಕಗಳೊಂದಿಗೆ 453 ರನ್ ಸಿಡಿಸಿದ್ದು, 92* ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಯಸ್ತಿಕಾ, ಚರಣಿ ಅನ್‌ಸೋಲ್ಡ್
ರಿಚಾ ಮತ್ತು ದೀಪ್ತಿ ಹರಾಜಿನಲ್ಲಿ ತಂಡ ಸೇರುವಲ್ಲಿ ಯಶಸ್ವಿಯಾದರೆ, ಭಾರತದ ಇತರ ಕೆಲವು ಆಟಗಾರ್ತಿಯರಿಗೆ ನಿರಾಸೆಯಾಗಿದೆ. 15,000 ಪೌಂಡ್‌ಗಳ ಮೂಲಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ್ದ ಯುವ ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ. ಹಾಗೆಯೇ 27,500 ಪೌಂಡ್ ಮೂಲಬೆಲೆ ಹೊಂದಿದ್ದ ಎಡಗೈ ಸ್ಪಿನ್ನರ್ ಎನ್. ಶ್ರೀ ಚರಣಿ ಕೂಡ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹರಾಜಾಗದೆ (Unsold) ಉಳಿದಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮೇಲೆ ಫೈರಿಂಗ್.. ಶಾಕಿಂಗ್ ವಿಡಿಯೋ ವೈರಲ್!



















