ಉಳ್ಳಾಲ(ದಕ್ಷಿಣ ಕನ್ನಡ) : ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ಮನೆಗೆ ಮರಳದೆ ಕಾಣೆಯಾಗಿದ್ದು, ಇದೀಗ ಆತನ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ಕೊಣಾಜೆ ಗ್ರಾಮದ ಮುಚ್ಚಿಲಕೋಡಿ ಮನೆ ನಿವಾಸಿ ದಿನೇಶ್ ಶೆಟ್ಟಿಗಾರ್ ಎಂಬವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತರು.
ನಾಪತ್ತೆಯಾದ ದಿನವೇ ವಿವೇಕ್ ತಮ್ಮ ಸ್ಕೂಟರನ್ನು ಸೋಮೇಶ್ವರ ರಥದ ಕೊಠಡಿ ಸಮೀಪ ನಿಲ್ಲಿಸಿದ್ದು ಕಂಡುಬಂದಿದೆ. ಅಲ್ಲಿಯೇ ಮೊಬೈಲ್ ಫೋನ್ ಹಾಗೂ ಚಪ್ಪಲಿಗಳನ್ನು ಬಿಟ್ಟು ಕಾಣೆಯಾಗಿದ್ದರು. ವಿವೇಕ್ ಶೆಟ್ಟಿಗಾರ್ ಸುಮಾರು ಎಂಟು ತಿಂಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ವಿವೇಕ್ ಶೆಟ್ಟಿಗಾರ್ ಮಂಗಳೂರಿನ ಕದ್ರಿ ಬಳಿ ಇರುವ ವೇದ ಮೋರ್ಟಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿ ರಾತ್ರಿ 9 ಗಂಟೆಗೆ ಮನೆಗೆ ವಾಪಸಾಗುತ್ತಿದ್ದರು. ಅದರಂತೆ, ಮಾರ್ಚ್ 9ರಂದು ಬೆಳಿಗ್ಗೆ 11 ಗಂಟೆಗೆ ಕೆಲಸಕ್ಕೆ ತೆರಳಿದ್ದ ವಿವೇಕ್, ರಾತ್ರಿ ಸುಮಾರು 9.30ಕ್ಕೆ ತಾಯಿಗೆ ದೂರವಾಣಿ ಕರೆ ಮಾಡಿ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ತಿಳಿಸಿ, ಮನೆಗೆ ಬರಲು ತಡವಾಗಬಹುದು, ನನಗಾಗಿ ಕಾಯಬೇಡಿ ಎಂದು ಹೇಳಿದ್ದರು.
ಆದರೆ, ರಾತ್ರಿ 12 ಗಂಟೆಯಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಮರುದಿನ ಮಾರ್ಚ್ 10ರಂದು ಕೂಡ ಮೊಬೈಲ್‌ಗೆ ಕರೆ ಮಾಡಿದಾಗ ಸಂಪರ್ಕವಾಗಿರಲಿಲ್ಲ. ಬಳಿಕ ವಿವೇಕ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ಕರೆ ಮಾಡಿ ವಿಚಾರಿಸಿದಾಗ ಕಂಪೆನಿ ಬಂದ್ ಆಗಿರುವುದಾಗಿ ತಿಳಿದುಬಂದಿದೆ.
ನಂತರ ಕುಟುಂಬಸ್ಥರು ಹಾಗೂ ಪರಿಚಿತರ ಬಳಿ ವಿಚಾರಿಸಿದರೂ ವಿವೇಕ್ ಶೆಟ್ಟಿಗಾರ್ ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಅವರು ಕಾಣೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ಇದೀಗ ವಿವೇಕ್ ಶೆಟ್ಟಿಗಾರ್ ಮೃತದೇಹ ಸೋಮೇಶ್ವರ ಕೆರೆಯಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ : ದೇಶಾದ್ಯಂತ LPG ಕೊರತೆ.. ರೈಲುಗಳಲ್ಲೂ ಇನ್ಮುಂದೆ ಬಿಸಿ ಬಿಸಿ ಊಟ ಸಿಗಲ್ಲ!?



















