ವಾಷಿಂಗ್ಟನ್ : ಭಾರತದ ಪ್ರಮುಖ ಉದ್ಯಮ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೂಡಿಕೆಯ ನೆರವಿನೊಂದಿಗೆ, ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಅಮೆರಿಕದಲ್ಲಿ ನೂತನ ತೈಲ ಸಂಸ್ಕರಣಾಗಾರ (ಆಯಿಲ್ ರಿಫೈನರಿ) ಆರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ‘ಅಮೆರಿಕಾ ಫಸ್ಟ್ ರಿಫೈನಿಂಗ್’ ಕಂಪನಿಯು ಈ ಹೊಸ ಸಂಸ್ಕರಣಾಗಾರವನ್ನು ತೆರೆಯಲಿದೆ ಎಂದು ಅವರು ತಮ್ಮ ‘ಟ್ರುತ್ ಸೋಷಿಯಲ್’ ಜಾಲತಾಣದಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಆತಂಕವನ್ನು ಶಮನಗೊಳಿಸಲು ಶ್ವೇತಭವನ ಈ ಮಹತ್ವದ ಹೆಜ್ಜೆ ಇಟ್ಟಿದೆ. ತೈಲ ಮತ್ತು ಗ್ಯಾಸೋಲಿನ್ ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ತುರ್ತು ಮೀಸಲುಗಳಿಂದ ಇಂಧನ ಬಿಡುಗಡೆ ಮಾಡುವುದು ಹಾಗೂ ಹ`ರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳಿಗೆ ಸೇನಾ ಬೆಂಗಾವಲು ಒದಗಿಸುವಂತಹ ಹಲವು ಸಾಧ್ಯತೆಗಳನ್ನು ಟ್ರಂಪ್ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ಟೆಕ್ಸಾಸ್‌ನಲ್ಲಿ ತಲೆ ಎತ್ತಲಿದೆ ಬೃಹತ್ ಯೋಜನೆ
ಜೂನ್ 2024ರಲ್ಲಿ ‘ಎಲಿಮೆಂಟ್ ಫ್ಯುಯೆಲ್ಸ್’ ಎಂಬ ಕಂಪನಿಯು ಅಭಿವೃದ್ಧಿಪಡಿಸುತ್ತಿದ್ದ ಯೋಜನೆಯೇ ಈಗ ‘ಅಮೆರಿಕ ಫಸ್ಟ್ ರಿಫೈನಿಂಗ್’ ಹೆಸರಿನಲ್ಲಿ ಕಾರ್ಯಗತಗೊಳ್ಳುತ್ತಿದೆ. ಪ್ರತಿದಿನ ಸುಮಾರು 1.60 ಲಕ್ಷ ಬ್ಯಾರೆಲ್ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿರಲಿದೆ. ಸಂಪೂರ್ಣವಾಗಿ ಅಮೆರಿಕದ ಶೇಲ್ ತೈಲವನ್ನು (shale oil) ಬಳಸಿಕೊಂಡು ಇದು ಕಾರ್ಯನಿರ್ವಹಿಸಲಿದೆ. ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾಮಗಾರಿ ಆರಂಭವಾಗಲಿದ್ದು, ಇಲ್ಲಿ ಉತ್ಪಾದನೆಯಾಗುವ ಇಂಧನವನ್ನು ಖರೀದಿಸಲು ಭಾರತದ ರಿಲಯನ್ಸ್ ಸಂಸ್ಥೆಯೊಂದಿಗೆ ಈಗಾಗಲೇ 20 ವರ್ಷಗಳ ಸುದೀರ್ಘ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ ಸ್ಪಷ್ಟಪಡಿಸಿದೆ.
ಅಮೆರಿಕದ ಇಂಧನ ಪಾರುಪತ್ಯ
ಇಂಧನ ಕ್ಷೇತ್ರದಲ್ಲಿ ಅಮೆರಿಕದ ಪಾರುಪತ್ಯವನ್ನು ಸಾಧಿಸುವ ನೀತಿಯನ್ನು ಟ್ರಂಪ್ ಆಡಳಿತ ತೀವ್ರಗೊಳಿಸಿದ್ದು, ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕಳೆದ ಒಂದೂವರೆ ದಶಕದಲ್ಲಿ ಅಮೆರಿಕದ ತೈಲ ಉತ್ಪಾದನೆ ಹೆಚ್ಚಾಗಿದ್ದರೂ, ಅಲ್ಲಿನ ಹಳೆಯ ಸಂಸ್ಕರಣಾಗಾರಗಳು ಮತ್ತು ಇತ್ತೀಚೆಗೆ ಮುಚ್ಚಲ್ಪಟ್ಟ ಕೆಲವು ಘಟಕಗಳಿಂದಾಗಿ ಸಂಸ್ಕರಣಾ ಸಾಮರ್ಥ್ಯದ ಕೊರತೆ ಎದುರಾಗಿತ್ತು. ಈ ಹಿಂದೆ ಅರಿಜೋನಾ ಕ್ಲೀನ್ ಫ್ಯುಯೆಲ್ಸ್ ಯೂಮಾ ಸಂಸ್ಥೆಯು 2.5 ಬಿಲಿಯನ್ ಡಾಲರ್ ವೆಚ್ಚದಲ್ಲಿ ಹೊಸ ಘಟಕ ನಿರ್ಮಿಸಲು ಮುಂದಾಗಿದ್ದರೂ, ಭಾರಿ ವೆಚ್ಚ, ಸಂಕೀರ್ಣವಾದ ಸರ್ಕಾರಿ ಅನುಮತಿ ಪ್ರಕ್ರಿಯೆಗಳು ಹಾಗೂ ಪರಿಸರವಾದಿಗಳ ವಿರೋಧದಿಂದಾಗಿ ಆ ಯೋಜನೆ ವಿಫಲವಾಗಿತ್ತು. ಇದೀಗ ರಿಲಯನ್ಸ್ ಬೆಂಬಲದೊಂದಿಗೆ ಟೆಕ್ಸಾಸ್ ಯೋಜನೆ ಸಾಕಾರಗೊಳ್ಳುವ ವಿಶ್ವಾಸ ಮೂಡಿದೆ.
ಇದನ್ನೂ ಓದಿ : 13 ವರ್ಷಗಳ ನರಕಯಾತನೆಗೆ ಶೀಘ್ರ ಮುಕ್ತಿ.. ಗಾಜಿಯಾಬಾದ್ ಯುವಕನಿಗೆ ದಯಾಮರಣ ಕಲ್ಪಿಸಿದ ಸುಪ್ರೀಂಕೋರ್ಟ್



















