ಬೆಂಗಳೂರು : ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET UG 2026) ಅರ್ಜಿ ಸಲ್ಲಿಸುವ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮುಂದೂಡಿಕೆ ಮಾಡಿದೆ. ಇದಕ್ಕೂಮೊದಲು ಅರ್ಜಿ ಸಲ್ಲಿಸಲು ಮಾರ್ಚ್ 8 ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಮಾರ್ಚ್ 11ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಅರ್ಜಿ ಸಲ್ಲಿಸುವವರಿಗೆ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ.
ಹೊಸ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 11, 2026 (ರಾತ್ರಿ 9:00 ಗಂಟೆಯವರೆಗೆ).
ಶುಲ್ಕ ಪಾವತಿಸಲು ಕೊನೆಯ ಸಮಯ: ಮಾರ್ಚ್ 11, 2026 (ರಾತ್ರಿ 11:50 ಗಂಟೆಯವರೆಗೆ).
ಅರ್ಜಿ ಸಲ್ಲಿಸುವ ನೀಟ್ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷಗಳು ಮತ್ತು OTP ಸ್ವೀಕರಿಸುವಲ್ಲಿ ಆಗುತ್ತಿದ್ದ ವಿಳಂಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕವನ್ನು ಮುಂದೂಡಲಾಗಿದೆ. ಆದರೆ, ಪರೀಕ್ಷೆಯು ಮೊದಲೇ ನಿಗದಿಯಾದಂತೆ 2026ರ ಮೇ 3 ರಂದು ನಡೆಯಲಿದೆ. ಇನ್ನು ಮುಂದೆ ಯಾವುದೇ ಅವಧಿ ವಿಸ್ತರಣೆ ಇರುವುದಿಲ್ಲ ಎಂದು ಪರೀಕ್ಷಾ ಸಂಸ್ಥೆಯು ಸ್ಪಷ್ಟಪಡಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ?
• ಅಧಿಕೃತ ವೆಬ್ ಸೈಟ್ ಆಗಿರುವ https://neet.nta.nic.in/ ಗೆ ಭೇಟಿ ನೀಡಿ ‘New Registration’ ಮೇಲೆ ಕ್ಲಿಕ್ ಮಾಡಿ.
• ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ನೋಂದಾಯಿಸಿಕೊಳ್ಳಿ. ನಿಮಗೆ ಒಂದು ‘Application Number’ ದೊರೆಯುತ್ತದೆ.
• ಅಪ್ಲಿಕೇಶನ್ ನಂಬರ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
• ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ (10 ಮತ್ತು 12ನೇ ತರಗತಿ) ಮತ್ತು ಪರೀಕ್ಷಾ ಕೇಂದ್ರದ ಆದ್ಯತೆಯನ್ನು ಭರ್ತಿ ಮಾಡಿ.
• ದಾಖಲೆಗಳು, ಪಾಸ್ ಪೋರ್ಟ್ ಹಾಗೂ ಪೋಸ್ಟ್ ಕಾರ್ಡ್ ಸೈಜಿನ ಫೋಟೋ ಅಪ್ ಲೋಡ್ ಮಾಡಿ
• ಲೈವ್ ಫೋಟೋ ಕ್ಯಾಪ್ಚರ್ ಪ್ರಕ್ರಿಯೆ ಮುಗಿಸಿ, ಅರ್ಜಿಯ ಶುಲ್ಕವನ್ನು ಪಾವತಿಸಿ
• ಶುಲ್ಕ ಪಾವತಿಸಿದ ನಂತರ ‘Confirmation Page’ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ : “ಒಂದು ಲೀಟರ್ ತೈಲವೂ ರಫ್ತಾಗಲು ಬಿಡೆವು”.. ಅಮೆರಿಕದ ಬೆದರಿಕೆಗೆ ಇರಾನ್ ತಿರುಗೇಟು!



















