ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಇಲ್ಲಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತೀ ದಿನ ಭಕ್ತರ ದಂಡು ಹರಿದುಬರುತ್ತದೆ. ನಾಗಾರಾಧನೆಯ ಪುಣ್ಯಕ್ಷೇತ್ರವು ಜನಸಾಮಾನ್ಯರನ್ನು ಮಾತ್ರವಲ್ಲದೇ ಹೆಸರಾಂತ ಸೆಲೆಬ್ರಿಟಿಗಳನ್ನೂ ತನ್ನತ್ತ ಆಕರ್ಷಿಸುತ್ತದೆ. ಈಗಾಗಲೇ ಹಲವು ಜನಪ್ರಿಯ ತಾರೆಯರು ಇಲ್ಲಿಗೆ ಭೇಟಿ ಕೊಟ್ಟಿದ್ದು, ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅರ್ಜುನ್ ಕಪೂರ್ ಕೂಡಾ ದೇವರ ದರ್ಶನ ಪಡೆದಿದ್ದಾರೆ. ಜೊತೆಗೆ, ವಿಶೇಷ ಪೂಜಾ ವಿಧಿ ವಿಧಾನಗಳಲ್ಲಿಯೂ ಭಾಗಿಯಾಗಿ ಧನ್ಯರಾಗಿದ್ದಾರೆ.
ಹೌದು, ಬಾಲಿವುಡ್ ಸ್ಟಾರ್ ನಟ ಅರ್ಜುನ್ ಕಪೂರ್ ಅವರು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಕುಕ್ಕೆ ಕ್ಷೇತ್ರದಲ್ಲಿ ವಾಸ್ತವ್ಯವಿದ್ದ ಅವರು ಭಾನುವಾರ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿದ್ದು, ಸೋಮವಾರ ಆಶ್ಲೇಷ ಬಲಿ ಪೂಜೆಯಲ್ಲಿ ಭಾಗವಹಿಸಿದ್ದಾರೆ.
ಶನಿವಾರವೇ ಕ್ಷೇತ್ರಕ್ಕೆ ಆಗಮಿಸಿದ್ದ ನಟ ಅರ್ಜುನ್ ಕಪೂರ್, ವೈಯಕ್ತಿಕ ಕಾರಣಗಳು ಹಾಗೂ ಕಂಕಣ ಭಾಗ್ಯಕ್ಕಾಗಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಸೇವೆ ಸಲ್ಲಿಸಿದ್ದಾಗಿ ಮೂಲಗಳು ತಿಳಿಸಿವೆ.

ಪೂಜೆ ಬಳಿಕ ಅವರು ದೇವಾಲಯದ ಆಡಳಿತ ಕಚೇರಿಗೆ ಭೇಟಿ ನೀಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅಧ್ಯಕ್ಷರು, ನಟರನ್ನು ದೇಗುಲದ ವತಿಯಿಂದ ಗೌರವಿಸಿದರು. ಈ ವೇಳೆ ದೇವಾಲಯದ ಪಿಆರ್‌ಒ ಜಯರಾಮ್ ರಾವ್, ಮನ್ಮಥ ಬಟ್ಟೋಡಿ ಸೇರಿದಂತೆ ದೇವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಟ ಅರ್ಜುನ್ ಕಪೂರ್ ಅವರ ಭೇಟಿ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆಯಿತು.
ಇದನ್ನೂ ಓದಿ : ಕೊಳ್ಳೇಗಾಲ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಬೆಂಕಿ ಅವಘಡ : ಕಂಪ್ಯೂಟರ್, ದಾಖಲೆಗಳು ಸುಟ್ಟು ಭಸ್ಮ



















