ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿರುವ ಕಾರಣ ಷೇರು ಮಾರುಕಟ್ಟೆಯು ದಿನೇದಿನೆ ಕುಸಿತ ಕಾಣುತ್ತಿದೆ. ಜಾಗತಿಕ ಭೌಗೋಳಿಕ ರಾಜಕೀಯ ಸಂಘರ್ಷಗಳು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿವೆ. ಹಾಗಾಗಿ, ಷೇರು ಖರೀದಿ, ಮ್ಯೂಚುವಲ್ ಫಂಡ್ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ, ಹೂಡಿಕೆದಾರರು ಬ್ಯಾಂಕ್ ಎಫ್ ಡಿಯಂತಹ ಸುರಕ್ಷಿತ ಹೂಡಿಕೆಯ ಮೊರೆ ಹೋಗುತ್ತಿದ್ದಾರೆ. ಇದರ ಬೆನ್ನಲ್ಲೇ, ಎಚ್ ಡಿಎಫ್ ಸಿ ಬ್ಯಾಂಕ್ ಈಗ ಎಫ್ ಡಿ ಹೂಡಿಕೆ ಮೇಲಿನ ಬಡ್ಡಿದರವನ್ನು ಜಾಸ್ತಿ ಮಾಡಿದೆ.
ಹೌದು, 3 ವರ್ಷ 1 ದಿನದಿಂದ 4 ವರ್ಷ 7 ತಿಂಗಳವರೆಗಿನ ಹೂಡಿಕೆ ಮೇಲಿನ ಬಡ್ಡಿದರದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ 10 ಬೇಸಿಸ್ ಪಾಯಿಂಟ್ ಗಳನ್ನು ಏರಿಕೆ ಮಾಡಿದೆ. ಇದುವರೆಗೆ ಸಾಮಾನ್ಯ ಹೂಡಿಕೆದಾರರಿಗೆ ಶೇ.6.40ರಷ್ಟು ಬಡ್ಡಿದರ ನೀಡಲಾಗುತ್ತಿತ್ತು. ಈಗ ಇದನ್ನು ಶೇ.6.50ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ದೀರ್ಘಾವಧಿಗೆ ಹೂಡಿಕೆ ಮಾಡುವವರಿಗೆ ಹೆಚ್ಚಿನ ಲಾಭವಾಗಲಿದೆ.
ಇನ್ನು ಹಿರಿಯ ನಾಗರಿಕರು ಎಫ್ ಡಿ ಇರಿಸುವುದರ ಮೇಲಿನ ಬಡ್ಡಿದರವನ್ನೂ ಏರಿಕೆ ಮಾಡಲಾಗಿದೆ. ಇದುವರೆಗೆ ಹಿರಿಯ ನಾಗರಿಕರು 3 ವರ್ಷ 1 ದಿನದಿಂದ 4 ವರ್ಷ 7 ತಿಂಗಳವರೆಗೆ ಎಫ್ ಡಿ ಇರಿಸಿದರೆ ಶೇ.6.90ರಷ್ಟು ಬಡ್ಡಿದರ ನೀಡಲಾಗುತ್ತಿತ್ತು. ಈಗ ಅದನ್ನು ಶೇ.7ಕ್ಕೆ ಏರಿಕೆ ಮಾಡಲಾಗಿದೆ. ಇದು ಕೂಡ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ತರಲಿದೆ.
ಎಚ್ ಡಿ ಎಫ್ ಸಿ ಸೇರಿ ಹಲವು ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ಎಲ್ಲ ಅವಧಿಗಳ ಹೂಡಿಕೆಗಳ ಮೇಲೆ ಸಾಮಾನ್ಯ ಗ್ರಾಹಕರಿಗಿಂತ ಶೇ.0.50ರವರೆಗೆ ಹೆಚ್ಚಿನ ಬಡ್ಡಿ ನೀಡುತ್ತವೆ. ಹಾಗಾಗಿ, ಮನೆಯಲ್ಲಿ ಹಿರಿಯ ನಾಗರಿಕರು ಇದ್ದರೆ, ಅವರ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಕೂಡ ಲಾಭದಾಯಕ.
ಇದನ್ನೂ ಓದಿ : ವಿಶ್ವಕಪ್ ಗೆದ್ದರೂ ಅಂದಿನ ಆ ಉನ್ಮಾದವೇಕಿಲ್ಲ? ಭಾರತದ ಮೌನ ಸಂಭ್ರಮದ ಹಿಂದಿದೆ ಅಚ್ಚರಿಯ ಮನೋವಿಜ್ಞಾನ



















